ವಾರಾಣಾಸಿ: ಚಳಿಗಾಲ ಆರಂಭವಾಗಿದ್ದು ದೇಶಾದ್ಯಂತ ಜನ ಚಳಿಯಿಂದ ಪಾರಾಗಲು ಬೆಚ್ಚ ಬೆಚ್ಚನೆಯ ಸ್ವೆಟರ್, ಶಾಲುಗಳ ಮೊರೆ ಹೋಗಿರುವುದು ಸಾಮಾನ್ಯವಾಗಿದೆ. ಹಾಗೆಯೇ ದೇವನಗರಿ, ದೇಗುಲಗಳ ನಗರಿ ಎಂದೆಲ್ಲಾ ಕರೆಯಲ್ಪಡುವ ಕಾಶಿಯಲ್ಲೂ ಚಳಿಯ ಅಬ್ಬರ ಜೋರಾಗಿದೆ.
ವಾರಾಣಾಸಿಯ ಲೋಹ್ತಿಯಾದಲ್ಲಿರುವ ದೊಡ್ಡ ಗಣೇಶ ಮಂದಿರದಲ್ಲಿ ಭಕ್ತರು, ದೇವರನ್ನು ಕಂಬಳಿ ರಜಾಯಿಯಿಂದ ಶೃಂಗಾರ ಮಾಡಿದ್ದಾರೆ. ಅಮ್ಮನಿಗೆ ಚಳಿ ಆದರೆ ಅಮ್ಮ ತನ್ನ ಪುಟ್ಟ ಕಂದನನ್ನು ಬೆಚ್ಚನೆಯ ಬಟ್ಟೆಗಳನ್ನು ತೊಡಿಸಿ ಬೆಚ್ಚಗಿಡುವಂತೆ ಇಲ್ಲಿ ಚಳಿಯಿಂದ ಕಂಗೆಟ್ಟ ಭಕ್ತರು ದೇವರಿಗೂ ಚಳಿಯಾಗುತ್ತದೆ. ಆತನನ್ನು ಚಳಿಯಿಂದ ರಕ್ಷಿಸಬೇಕೆಂದು ಭಾವಿಸಿ ಕಂಬಳಿಯನ್ನು ಹೊದಿಸಿ ಶೃಂಗಾರ ಮಾಡಿದ್ದಾರೆ.