ನವದೆಹಲಿ:ತಮ್ಮ ವರ್ಚಸ್ಸಿನಿಂದಲೇ ಬಿಜೆಪಿಯನ್ನು ಮತ್ತೆ ಕೇಂದ್ರದಲ್ಲಿ ಗದ್ದುಗೆ ಏರುವಂತೆ ಮಾಡಿದ ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ತಮ್ಮ ಎಂದಿನ ಶೈಲಿಯ ಕುರ್ತಾದಲ್ಲಿ ಮೋದಿ ಮಿರಿ ಮಿರಿ ಮಿಂಚುತ್ತಿದ್ದರು.
ಗುಜರಾತಿನ ಸಾಮಾನ್ಯ ಆರ್ಎಸ್ಎಸ್ ಕಾರ್ಯಕರ್ತನಾದಾಗಿನಿಂದ ಹಿಡಿದು ನವಭಾರತದ ಜನನಾಯಕನಾಗಿ ಮೋದಿ ಬೆಳೆದಿದ್ದು ಇತಿಹಾಸ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ವಂತ ಶ್ರಮದಿಂದ 300 ಸ್ಥಾನಗಳ ಗಡಿ ದಾಟಿ, ಮತ್ತೊಮ್ಮೆ ಪ್ರಧಾನಿಯಾಗಿ ಪದಗ್ರಹಣ ಮಾಡಿದ್ದೂ ಇತಿಹಾಸ.
ಗುಜರಾತ್ನ ಬಿಜೆಪಿಯಲ್ಲಿ ಹಲವು ಸ್ಥಾನಗಳನ್ನು ಅಲಂಕರಿಸಿ, ನಿಷ್ಠೆಯಿಂದ ದುಡಿದಿದ್ದ ಮೋದಿ 2002ರಲ್ಲಿ ಗುಜರಾತ್ ಸಿಎಂ ಆಗಿ, ಆನಂತರ 2007 ಹಾಗೂ 2012ರಲ್ಲಿ ಒಟ್ಟು ಮೂರು ಬಾರಿ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ. ಮೋದಿ ವಾಕ್ಚತುರತೆ, ಕಾರ್ಯನಿಷ್ಠೆ ಗಮನಿಸಿದ ಬಿಜೆಪಿ 2014ರ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತು.
ಬದಲಾವಣೆಯ ಅಲೆಯನ್ನೇ ಸೃಷ್ಟಿಸಿದ ಮೋದಿ, ಲೋಕಸಭೆ ಚುನಾವಣೆಯಲ್ಲಿ ವಾರಣಾಸಿಯಿಂದ ಜಯಸಿ, ತಮ್ಮದೇ ವರ್ಚಸ್ಸಿನ ಮೂಲಕ ಬಿಜೆಪಿಯನ್ನೂ ಅಧಿಕಾರಕ್ಕೆ ತಂದರು. ಐದು ವರ್ಷಗಳ ಕಾಲ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿ, ಜನಪ್ರಿಯತೆ ಗಳಿಸಿದರು. ಮೋದಿ ಮೊದಲ ಅವಧಿಯಲ್ಲಾದ ನೋಟು ಅಮಾನ್ಯೀಕರ, ಜಿಎಸ್ಟಿ, ಸ್ವಚ್ಛ ಭಾರತ ಮೊದಲಾದ ಮಹತ್ವ ಯೋಜನೆಗಳು ಬಿಜೆಪಿಗೆ ಬಲ ತುಂಬಿದವು. ಆಡಳಿತ ವಿರೋಧಿ ಅಲೆ ಇದೆ ಎಂಬ ಮಾತುಗಳ ನಡುವೆಯೂ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಮೋಘ ಜಯ ಸಾಧಿಸಿ, ಇದೀಗ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಎರಡನೇ ಬಾರಿಗೆ ಪ್ರದಗ್ರಹಣ ಮಾಡಿದ ನರೇಂದ್ರ ದಾಮೋದರ್ ದಾಸ್ ಮೋದಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ಭಿಮ್ಸ್ಟೆಕ್ ರಾಷ್ಟ್ರಗಳ ಪ್ರಮುಖರು ಸುಮಾರು 8 ಸಾವಿರ ಗಣ್ಯರು ಸಾಕ್ಷಿಯಾದರು.