ನವದೆಹಲಿ:ರಾಷ್ಟ್ರರಾಜಧಾನಿಯ 11 ಶಾಲೆಗಳನ್ನು ವಲಸೆ ಕಾರ್ಮಿಕರಿಗೆ ರಾತ್ರಿಯ ತಾತ್ಕಾಲಿಕ ಆಶ್ರಯ ತಾಣಗಳಾಗಿ ದೆಹಲಿ ಸರ್ಕಾರ ಪರಿವರ್ತಿಸಿದೆ.
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಮೂರು ವಾರಗಳ ಲಾಕ್‌ಡೌನ್ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಿಂದ ಉತ್ತರ ಪ್ರದೇಶ ಮತ್ತು ಬಿಹಾರದ ತಮ್ಮ ಮನೆಗಳ ಕಡೆಗೆ ತೆರಳುತ್ತಿರುವ ವಲಸೆ ಕಾರ್ಮಿಕರಿಗೆ ಸ್ಥಳಾವಕಾಶ ನೀಡುವ ಸಲುವಾಗಿ ದೆಹಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ದೇಶದಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ವಲಸೆ ಕಾರ್ಮಿಕರು ದೆಹಲಿಯಿಂದ ಉತ್ತರ ಪ್ರದೇಶ ಮತ್ತು ಬಿಹಾರದ ತಮ್ಮ ಮನೆಗಳತ್ತ ಹೊರಡಲು ಪ್ರಾರಂಭಿಸಿದ್ದರು. ಹೀಗಾಗಿ ಇದರ ಅಪಾಯವನ್ನು ಗಂಭೀರವಾಗಿ ತೆಗದುಕೊಂಡ ದೆಹಲಿ ಸರ್ಕಾರ ಹೆಚ್ಚಿನ ಜನರಿಗೆ ಸ್ಥಳಾವಕಾಶ ಮತ್ತು ಅವರಿಗೆ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬಂದಿದೆ.
ಈಗಾಗಲೇ ದೆಹಲಿಯಲ್ಲಿರುವ 238 ರಾತ್ರಿ ಆಶ್ರಯ ಸ್ಥಳಗಳ ಜೊತೆಗೆ, ಈ ಶಾಲೆಗಳ ತರಗತಿ ಕೊಠಡಿಗಳು ಮತ್ತು ಸಭಾಂಗಣಗಳನ್ನು ಮಲಗುವ ಕೋಣೆಗಳಾಗಿ ಪರಿವರ್ತಿಸಲಾಗಿದೆ. ಇಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಭದ್ರತೆಗಾಗಿ ಸಿಬ್ಬಂದಿಯನ್ನು ನೇಮಿಸಲಾಗಿದೆ.
ದೆಹಲಿಯಲ್ಲಿ ನಿನ್ನೆ 25 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ದೆಹಲಿ ಆರೋಗ್ಯ ಇಲಾಖೆಯ ಪ್ರಕಾರ ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 97ಕ್ಕೇರಿದೆ.