ಹೈದರಾಬಾದ್: ಭಿನ್ನಾಭಿಪ್ರಾಯ ಎಂಬುದು ಪ್ರಜಾಪ್ರಭುತ್ವದ ಮೂಲ ಗುಣ. ಭಾರತದ ಸಂವಿಧಾನವು ಪ್ರತಿಪಕ್ಷದ ನಾಯಕನಿಗೆ ಶಾಸನಬದ್ಧ ಸ್ಥಾನವನ್ನು ನೀಡುವ ಮೂಲಕ ಅದಕ್ಕೆ ಒತ್ತು ನೀಡಿದೆ. ಸಂವಿಧಾನವನ್ನು ಪಾಲಿಸುವುದಾಗಿ ಪ್ರತಿಜ್ಞೆ ಮಾಡುವ ರಾಜಕೀಯ ಪಕ್ಷಗಳ ನಾಯಕರು, ತಾವು ಚುನಾಯಿತರಾದ ಕ್ಷಣದಿಂದಲೇ ಎಲ್ಲಾ ನಿರ್ದೇಶನಗಳನ್ನು ಗಾಳಿಗೆ ತೂರುತ್ತಾರೆ. ವಸಾಹತುಶಾಹಿ ದೊರೆಗಳು ರೂಪಿಸಿದ ಮಾನಹಾನಿ ಕಾನೂನನ್ನು ಬಳಸಿಕೊಂಡು, ಪ್ರಸ್ತುತ ಆಡಳಿತಗಾರರು ಪತ್ರಿಕಾ ಸ್ವಾತಂತ್ರ್ಯ ನಿಗ್ರಹಿಸುತ್ತಿದ್ದಾರೆ. ಇತ್ತೀಚೆಗೆ, ಮದ್ರಾಸ್ ಹೈಕೋರ್ಟ್ ಪ್ರಜಾಪ್ರಭುತ್ವದ ನಾಲ್ಕನೇ ಶಕ್ತಿಯ ಸ್ವಾತಂತ್ರ್ಯವನ್ನು ತಡೆಯುವ ಸರ್ಕಾರದ ಪ್ರಯತ್ನಗಳನ್ನು ಖಂಡಿಸಿತು. ತಮ್ಮನ್ನು ವಿರೋಧಿಸುವ ಯಾರನ್ನಾದರೂ ಹಿಮ್ಮೆಟ್ಟಿಸಲು ಮುಂದಾಗುವ ಸರ್ಕಾರಗಳು, ನ್ಯಾಯಾಲಯದ ಆದೇಶಗಳಿಗೆ ಗಮನ ಕೊಡುತ್ತವೆಯೇ?
ಪ್ರತೀಕಾರದ ರಾಜಕಾರಣಕ್ಕೆ ಹೆಸರಾದ ತಮಿಳುನಾಡಿನಲ್ಲಿ ಜಯಲಲಿತಾರನ್ನು ಪುರಚಿ ತಲೈವಿ ( ಕ್ರಾಂತಿಕಾರಿ ನಾಯಕಿ ) ಎಂದು ಕರೆಯಲಾಗುತ್ತದೆ. ತನ್ನ ತಪ್ಪುಗಳನ್ನು ವರದಿ ಮಾಡಿದ ಪತ್ರಿಕೆಗಳು, ಸುದ್ದಿ ವಾಹಿನಿಗಳು ಹಾಗೂ ಮಾಧ್ಯಮ ಸಿಬ್ಬಂದಿಯನ್ನು ಮಾನಹಾನಿ ಪ್ರಕರಣಗಳ ಮೂಲಕ ನಿಗ್ರಹಿಸುವ ಕುಖ್ಯಾತಿ ಜಯಲಲಿತಾ ಅವರದ್ದಾಗಿತ್ತು. 2011 ಮತ್ತು 13 ರ ನಡುವೆ, ದಿ ಹಿಂದೂ, ನಕ್ಕೀರನ್, ದಿ ಟೈಮ್ಸ್ ಆಫ್ ಇಂಡಿಯಾ, ದಿನಮಲಾರ್, ತಮಿಳು ಮುರಸು, ಮುರಸೋಳಿ ಹಾಗೂ ದಿನಕರನ್ ರೀತಿಯ ಮಾಧ್ಯಮ ಸಂಸ್ಥೆಗಳ ವಿರುದ್ಧ ತಮಿಳುನಾಡು ಸರ್ಕಾರ 25 ಕ್ಕೂ ಹೆಚ್ಚು ಮಾನಹಾನಿ ಮೊಕದ್ದಮೆಗಳನ್ನು ಹೂಡಿತು.
ಚೆನ್ನೈನಲ್ಲಿ ಕಾಲರಾ ನಿಯಂತ್ರಿಸುವಲ್ಲಿ ಆಡಳಿತಾರೂಢ ಸರ್ಕಾರದ ನಿರ್ಲಕ್ಷ್ಯ ಧೋರಣೆ ತಳೆದುದರ ವಿರುದ್ಧ ಡಿ ಎಂ ಕೆ ಪ್ರತಿಭಟನೆ ನಡೆಸಿತ್ತು ಇದನ್ನು ನಕ್ಕೀರನ್ ವರದಿ ಮಾಡಿತ್ತು. ವರದಿಯನ್ನು ವಿರೋಧಿಸಿ ಎ ಐ ಎ ಡಿ ಎಂ ಕೆ ಕಾರ್ಯಕರ್ತರು ನಕ್ಕೀರನ್ ಕಚೇರಿಯ ಮೇಲೆ ದಾಳಿ ನಡೆಸಿದ್ದರು. ಜನಸೇವಕರು ಮತ್ತು ಸಾಂವಿಧಾನಿಕ ಸ್ಥಾನಗಳಲ್ಲಿ ಇರುವವರು ವೈಯಕ್ತಿಕ ಕಾರಣಕ್ಕಾಗಿ ಮಾನನಷ್ಟ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂಬ ನ್ಯಾಯಮೂರ್ತಿ ಅಬ್ದುಲ್ ಅವರ ತೀರ್ಪು, ನಾಯಕರಿಗೆ ಎಚ್ಚರಿಕೆ ರೂಪದಲ್ಲಿ ಬಂದ ಕರೆ. ಅಲ್ಲದೆ ಅವರು ಜನಸೇವಕರು ಮತ್ತು ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರಿಗೆ ಉತ್ತರದಾಯಿಗಳು ಎಂದು ಹೇಳಿದ್ದಾರೆ. ಆದ್ದರಿಂದ, ಜನಸೇವಕರು ಅಥವಾ ಸಾಂವಿಧಾನಿಕ ಸ್ಥಾನಗಳಲ್ಲಿ ಇರುವವರು ಟೀಕೆಗಳನ್ನು ಎದುರಿಸಲು ಸಿದ್ಧರಾಗಿ ಇರಬೇಕು. ನಾಗರಿಕರ ಟೀಕೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಪೋಷಕರ ನಿಲುವು ತಳೆಯಬೇಕು ಎಂಬ ಹೈಕೋರ್ಟ್ ಸಲಹೆ ಶ್ಲಾಘನೀಯ.
ಅಪರಾಧ ಸ್ವರೂಪದ ಮಾನಹಾನಿ ಪ್ರಕರಣಗಳನ್ನು ಎದುರಿಸುವಲ್ಲಿ ರಾಜ್ಯ ಸರ್ಕಾರಗಳು ಹೆಚ್ಚು ಸಂಯಮ ಮತ್ತು ಪ್ರಬುದ್ಧತೆ ತೋರಬೇಕು ಎಂದು ನ್ಯಾಯಾಧೀಶರು ಒತ್ತಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ, ಮಾನನಷ್ಟ ಮೊಕದ್ದಮೆಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ನ್ಯಾಯಾಲಯಗಳು ಹೆಚ್ಚಿನ ಪ್ರಕರಣಗಳಲ್ಲಿ ಕೆಲಸ ಮಾಡುವಂತೆ ನಿರೀಕ್ಷಿಸುವುದು ಸಮಂಜಸ ಎನಿಸಿದೆ. ನ್ಯಾಯಮೂರ್ತಿ ಅಬ್ದುಲ್ ಅವರ ತೀರ್ಪಿನ ಮತ್ತೊಂದು ಪ್ರಮುಖ ಅಂಶ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.