ಹೈದರಾಬಾದ್ :ಜಲಪ್ರಳಯಕ್ಕೆ ದಕ್ಷಿಣ ಭಾರತ ತತ್ತರಿಸಿದೆ. ಈ ನೈಸರ್ಗಿಕ ವಿಕೋಪ ಅತ್ತ ಉತ್ತರ ಭಾರತವನ್ನೂ ಬಿಟ್ಟಿಲ್ಲ. ಇತ್ತ ದಕ್ಷಿಣ ಭಾರತವನ್ನೂ ಬಿಡುತ್ತಿಲ್ಲ. ಈ ನಡುವೆ ಮಳೆ ಹಾಗೂ ಪ್ರವಾಹದ ಕಾರಣದಿಂದಾಗಿ ಮೃತಪಟ್ಟವರ ಸಂಖ್ಯೆ 86ಕ್ಕೇರಿದೆ.
ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು ಮಳೆಯ ಅವಾಂತರಕ್ಕೆ ತತ್ತರಿಸಿದ್ದು, ಹಲವರ ಬದುಕು ಬೀದಿಗೆ ಬಿದ್ದಿದೆ. ಈ ನಡುವೆ ರಕ್ಷಣಾ ತಂಡಗಳಿಂದ ರಕ್ಷಣಾ ಕಾರ್ಯವೂ ಸಾಗಿದೆ.ಪ್ರವಾಹದಿಂದಾಗಿ ಶುಕ್ರವಾರ ಒಂದೇ ದಿನ ಕರ್ನಾಟಕದಲ್ಲಿ 10 ಜನ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 26 ಜನ ಸಾವನ್ನಪ್ಪಿದ್ದಾರೆ. ರಾಜ್ಯದ 12 ಜಿಲ್ಲೆಗಳಿಗೆ ಬಹುಪಾಲು ನಷ್ಟವುಂಟಾಗಿದ್ದು, ಈ ಎಲ್ಲಾ ಜಿಲ್ಲೆಗಳ ಜನರ ಬದುಕು ಅತಂತ್ರವಾಗಿದೆ. ಇತ್ತ ದಕ್ಷಿಣ ಕರ್ನಾಟಕದಲ್ಲಿ ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯಿದ್ದರೆ, ಉತ್ತರ ಕರ್ನಾಟಕದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ, ಉತ್ತರ ಕನ್ನಡ ಮೊದಲಾದ ರಾಜ್ಯಗಳಲ್ಲಿ ಪ್ರವಾಹ ವಿಕೋಪಕ್ಕೆ ತಲುಪಿದೆ. ಮುಂಜಾಗೃತಾ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮೊದಲಾದ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.