ನವದೆಹಲಿ:ಗಂಭೀರವಾಗಿ ಗಾಯಗೊಂಡು ಗುರು ತೇಜ್ ಬಹದ್ದೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ದೆಹಲಿ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.
ಮೃತ ಯುವಕನನ್ನು ಆಕಿಬ್ (18) ಎಂದು ಗುರುತಿಸಲಾಗಿದೆ. ಫೆ.24 ರಂದು ಈಶಾನ್ಯ ದೆಹಲಿಯ ಭಜನಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು GTB ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹಿಂಸಾಚಾರ ಪ್ರಕರಣ ಸಂಬಂಧ 369 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ವಶಕ್ಕೆ ಪಡೆದುಕೊಂಡವರ ಹಾಗೂ ಬಂಧಿತರ ಸಂಖ್ಯೆ 1,284 ಎಂದು ದೆಹಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿ ಹಿಂಸಾಚಾರದ ಕುರಿತು ಸುಳ್ಳು ವದಂತಿಗಳು ಹರಿದಾಡುತ್ತಿದ್ದು, ಇವುಗಳ ಪರಿಶೀಲಿಸಲು ದೆಹಲಿ ಪೊಲೀಸರು ಮಂಗಳವಾರ ರಾಷ್ಟ್ರ ರಾಜಧಾನಿಯ ವಿವಿಧ ಪ್ರದೇಶಗಳ ನಿವಾಸಿಗಳಿಗೆ 16 ಸಹಾಯವಾಣಿ ಸಂಖ್ಯೆಗಳನ್ನು ನೀಡಿದ್ದಾರೆ.