ಹೈದರಾಬಾದ್: ರಾಜಸ್ಥಾನ ಭರತ್‌ಪುರ ಮೂಲದ ಐವರು ಒಎಲ್ಎಕ್ಸ್ ವಂಚಕರ ಗ್ಯಾಂಗ್ನ್ನು ಸೈಬರಾಬಾದ್ ಕಮಿಷನರೇಟ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳಿಂದ 1 ಲಕ್ಷ ರೂ. ನಗದು, 21 ಸಿಮ್ ಕಾರ್ಡ್‌ಗಳು ಮತ್ತು 12 ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್, "ತೆಲಂಗಾಣದಲ್ಲಿ ಈ ಗ್ಯಾಂಗ್ ಮೇಲೆ ಸುಮಾರು 40 ಪ್ರಕರಣಗಳು ದಾಖಲಾಗಿವೆ. ಒಎಲ್ಎಕ್ಸ್ ವಂಚನೆ ಕುರಿತು ಹಲವು ದೂರುಗಳ ಬಂದ ನಂತರ, ವಿಶೇಷ ಸೈಬರ್ ಅಪರಾಧ ತಂಡವನ್ನು ರಚಿಸಲಾಯಿತು. ಸುಮಾರು 30 ದಿನಗಳ ಕಾರ್ಯಾಚರಣೆ ನಡೆಸಿದ ಬಳಿಕ ಖದೀಮರ ಗ್ಯಾಂಗ್ನ್ನು ಬಂಧಿಸಲಾಗಿದೆ" ಎಂದು ತಿಳಿಸಿದರು.
ಮರ್ಫೀದ್, ಸೈಕುಲ್ ಖಾನ್, ಶಾರುಖ್ ಮತ್ತು ರಾಖಮ್ ಖಾನ್ ಎಂಬ ಮೂವರು ಕಿಡಿಗೇಡಿಗಳ ಸಹಾಯದಿಂದ ರುಖ್ಮಿನ್ ಎಂಬಾತ ನಕಲಿ ಇ-ವ್ಯಾಲೆಟ್ ಖಾತೆಗಳು, ಬ್ಯಾಂಕ್ ಖಾತೆಗಳನ್ನು ತೆರೆದು, ಪಾವತಿ ವಿನಂತಿಯ ಕ್ಯೂಆರ್ ಸಂಕೇತಗಳನ್ನು ಗ್ರಾಹಕರಿಗೆ ಕಳುಹಿಸುತ್ತಾನೆ. ಕೆಲ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳಿ, ಒಎಲ್ಎಕ್ಸ್ ಮೂಲಕ ವಾಹನಗಳನ್ನು, ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡಲು ಸಿದ್ಧರಿದ್ದೇವೆ ಎಂದು ಜನರನ್ನು ನಂಬಿಸುತ್ತಾರೆ. ಬಳಿಕ ಗ್ರಾಹಕರನ್ನು ಸಂಪರ್ಕಿಸಿ ಹಣವನ್ನು ಪಾವತಿ ಮಾಡಲು ಸೂಚಿಸುತ್ತಾರೆ. ಈ ವೇಳೆ ಹಣವನ್ನು ದೋಚಿ ಗ್ರಾಹಕರಿಗೆ ಮೋಸ ಮಾಡುತ್ತಾರೆ.
"ಒಎಲ್‌ಎಕ್ಸ್‌ನಲ್ಲಿ ಯಾವುದೇ ವಹಿವಾಟು ನಡೆಸುವಾಗ ಜಾಗರೂಕರಾಗಿರಿ. ಆನ್‌ಲೈನ್ ಅಪ್ಲಿಕೇಶನ್‌ಗಳಲ್ಲಿ ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಸಂಪೂರ್ಣ ವಿಶ್ವಾಸ ಗಳಿಸಿದ ನಂತರವೇ ಒಪ್ಪಂದಕ್ಕೆ ಬನ್ನಿ" ಎಂದು ಪೊಲೀಸ್ ಆಯುಕ್ತ ಸಜ್ಜನರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.