ತಿರುವನಂತಪುರಂ :ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ವಿರುದ್ಧ ಈಗ ಇನ್ನೊಂದು ಆರೋಪ ಕೇಳಿ ಬಂದಿದ್ದು, ಏರ್ ಇಂಡಿಯಾ ಎಸ್‌ಎಟಿಎಸ್ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿ ಸಿಬಿಐ ನ್ಯಾಯಾಲಯಕ್ಕೆ ಹೊಸ ತನಿಖಾ ವರದಿ ಸಲ್ಲಿಸಿದೆ.
ವರದಿಯ ಪ್ರಕಾರ, ಈ ಪ್ರಕರಣದಲ್ಲಿ ಸ್ವಪ್ನಾ ಎರಡನೇ ಆರೋಪಿಯಾಗಿದ್ದು, ಏರ್ ಇಂಡಿಯಾ ಎಸ್ಎಟಿಎಸ್ನಲ್ಲಿ ಕೆಲಸ ಮಾಡುವ ವೇಳೆ ಶಿಬು ಎಂಬ ಸಹೋದ್ಯೋಗಿಯ ವಿರುದ್ಧ ಸ್ವಪ್ನಾ ನಕಲಿ ದೂರು ದಾಖಲಿಸಿರುವುದು ಮತ್ತು ವಂಚನೆ ಮಾಡಿರುವುದು ತಿಳಿದು ಬಂದಿದೆ. ಪ್ರಕರಣದ ಮೊದಲ ಆರೋಪಿ ಬಿನೊಯ್ ಜಾಕೋಬ್ ಕೂಡ ಏರ್ ಇಂಡಿಯಾ ಎಸ್ಎಟಿಎಸ್ನಲ್ಲಿ ಕೆಲಸ ಮಾಡಿದ್ದ ಎಂದು ಗೊತ್ತಾಗಿದೆ.
ಸಿಬಿಐ ತನ್ನ ಹೊಸ ವರದಿಯನ್ನು ಭಾನುವಾರ ತಿರುವನಂತಪುರಂನ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದೆ. ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ವಪ್ನಾ ಸುರೇಶ್ಗೆ ಏರ್ ಇಂಡಿಯಾ ಎಸ್ಎಟಿಎಸ್ನೊಂದಿಗೆ ನಂಟು ಇತ್ತು ಎಂಬುವುದು ಗೊತ್ತಾದ ಬಳಿಕ ತನಿಖೆಗೆ ಸಹಕರಿಸುವಂತೆ ಎನ್ಐಎ ಆ ಸಂಸ್ಥೆಗಳೊಂದಿಗೆ ಕೇಳಿಕೊಂಡಿದ್ದವು. ಅದರಂತೆ ಸಂಸ್ಥೆ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿತ್ತು.
ಸಹೊದ್ಯೋಗಿ ಶಿಬು ಮಾತ್ರವಲ್ಲದೆ ಇತರ ಯುವತಿಯರಿಗೂ ಸ್ವಪ್ನಾ ವಂಚನೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಆರಂಭದಲ್ಲಿ ಈ ಪ್ರಕರಣದಲ್ಲಿ ಸ್ವಪ್ನಾ ಹೆಸರು ಇರಲಿಲ್ಲ. ಇದೀಗ ಸಲ್ಲಿಸಿರುವ ಹೊಸ ವರದಿಯಲ್ಲಿ ಎರಡನೇ ಆರೋಪಿಯಾಗಿ ಹೆಸರಿಲಾಗಿದೆ.