ನವದೆಹಲಿ:ಭಾರತದಲ್ಲಿ ಈವರೆಗೆ ಒಟ್ಟು 396 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಕಟ್ಟೆಚ್ಚರ ವಹಿಸಿರುವ ಸೋಂಕು ಪೀಡಿತ ರಾಜ್ಯಗಳ ಸರ್ಕಾರಗಳು ಮಾ.31ರ ವರೆಗೆ ಲಾಕ್ಡೌನ್ ಘೋಷಿಸಿವೆ.
ಕರ್ನಾಟಕದಲ್ಲಿ ಹೊಸದಾಗಿ 7 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 27ಕ್ಕೇ ಏರಿಕೆಯಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ, ಬೆಂ. ಗ್ರಾಮಾಂತರ, ದಕ್ಷಿಣ ಕನ್ನಡ, ಕಲಬುರಗಿ, ಕೊಡಗು, ಚಿಕ್ಕಬಳ್ಳಾಪುರ ಮತ್ತು ಮೈಸೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಜಿಲ್ಲೆಗಳು ಸಂಪೂರ್ಣ ಬಂದ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉತ್ತರ ಪ್ರದೇಶದಲ್ಲಿ 15 ನಗರಗಳನ್ನು ಲಾಕ್ಡೌನ್ ಮಾಡುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದ್ದು, ಮುಂಬೈ, ಪುಣೆ, ನಾಗ್ಪುರ ಸೇರಿ ಅನೇಕ ನಗರಗಳು ಬಂದ್ ಆಗಿವೆ.
ತೆಲಂಗಾಣ ರಾಜ್ಯಾದ್ಯಂತ ಮಾ.31ರ ವರೆಗೂ ಲಾಕ್ಡೌನ್ ಮಾಡುವುದಾಗಿ ಸಿಎಂ ಕೆ ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ. ಕೋವಿಡ್-19 ವಿರುದ್ಧ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಸಲುವಾಗಿ 1897 ರ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಲಾಕ್ಡೌನ್ ನಿರ್ಧಾರ ಕೈಗೊಂಡಿದ್ದಾರೆ. ಬಂದ್ ವೇಳೆ ಅಗತ್ಯ ವಸ್ತುಗಳ ಪೂರೈಕೆಗೆ ರಾಜ್ಯ ಸರ್ಕಾರ ಭರವಸೆ ನೀಡಿದೆ. ರಾಜ್ಯದಲ್ಲಿ ಬಿಳಿ ರೇಷನ್ ಕಾರ್ಡ್ ಹೊಂದಿರುವರಿಗೆ 12 ಕೆಜಿ ಅಕ್ಕಿ ಹಾಗೂ 1500 ರೂ. ನೀಡಲು ಕೆಸಿಆರ್ ಸರ್ಕಾರ ನಿರ್ಧರಿಸಿದೆ.
ಮಾ.31ರ ವರೆಗೆ ಹರಿಯಾಣದಲ್ಲಿ ಫರಿದಾಬಾದ್, ಗುರುಗ್ರಾಮ್, ರೋಹ್ಟಕ್, ಜಜ್ಜರ್, ಸೋನಿಪತ್, ಪಾಣಿಪತ್ ಮತ್ತು ಪಂಚಕುಲ ಈ ಏಳು ಜಿಲ್ಲೆಗಳು ಲಾಕ್ಡೌನ್ ಆಗಲಿವೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಘೋಷಣೆ ಮಾಡಿದ್ದಾರೆ.
ದೆಹಲಿಯಲ್ಲಿ ಇಂದು ರಾತ್ರಿ 9 ಗಂಟೆಯಿಂದ ಮಾ.31 ರ ಮಧ್ಯರಾತ್ರಿಯವರೆಗೂ ಸೆಕ್ಷನ್ 144 ಜಾರಿಯಾಗಿದೆ. ಅಲ್ಲದೇ ಸೋಮವಾರ ಬೆಳಗ್ಗೆ 6 ರಿಂದ ಮಾ.31ರ ಮಧ್ಯರಾತ್ರಿಯ ವರೆಗೆ ದೆಹಲಿಯ ಎಲ್ಲಾ ಪ್ರದೇಶಗಳು ಲಾಕ್ಡೌನ್. ಅಗತ್ಯ ಸೇವೆಗಳು ಮಾತ್ರ ಲಭ್ಯ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.