ನವದೆಹಲಿ: ಭಾರತದಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಭಾನುವಾರ ಒಂದೇ ದಿನ 23 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟನೆ ನೀಡಿದೆ.
1024 ಪ್ರಕರಣಗಳಲ್ಲಿ 901 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. 95 ಮಂದಿಗೆ ಚಿಕಿತ್ಸೆ ಮೂಲಕ ಗುಣಮುಖರನ್ನಾಗಿ ಮಾಡಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. 27 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಓರ್ವ ಸೋಂಕಿತ ವ್ಯಕ್ತಿಯನ್ನು ಬೇರೆ ದೇಶಕ್ಕೆ ಕಳುಹಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಮಹಾರಾಷ್ಟ್ರ ಕೊರೊನಾ ಸೋಂಕಿನಿಂದ ತೀವ್ರ ಉಪಟಳಕ್ಕೆ ಒಳಗಾದ ರಾಜ್ಯವಾಗಿದೆ. ಈಗ ಹೊಸ 12 ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಅಲ್ಲಿ ಸೋಂಕಿತರ ಸಂಖ್ಯೆ 215ಕ್ಕೆ ಏರಿಕೆಯಾಗಿದೆ. ಈವರೆಗೂ ಆರು ಮಂದಿ ಮೃಪಟ್ಟಿದ್ದಾರೆ. ನಂತರದ ಸ್ಥಾನದಲ್ಲಿ ಕೇರಳ ರಾಜ್ಯವಿದ್ದು 198 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಾರ ಕರ್ನಾಟಕದಲ್ಲಿ 84 ಮಂದಿ ಸೋಂಕಿತರಿದ್ದು, ಇದರಲ್ಲಿ 5 ಮಂದಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಈವರೆಗೂ ಮೂವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.