ಹೈದರಾಬಾದ್ :ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಕೊನೆಗಾಣಿಸಲು ಜಗತ್ತು ಕಸರತ್ತು ನಡೆಸಿರುವಂತೆಯೇ, ಅದು ಹರಡದಂತೆ ತಡೆಯಲು ಮಹತ್ವದ ಪ್ರತಿರೋಧ ಕ್ರಮಗಳು ಎನಿಸಿರುವ ಸಾಮಾಜಿಕ (ದೈಹಿಕ) ಅಂತರ ಕಾಯ್ದುಕೊಳ್ಳುವಿಕೆ ಮತ್ತು ಇತರ ಔಷಧೀಯವಲ್ಲದ ಕ್ರಮಗಳ ಮೇಲೆ ಜಾಗತಿಕ ನಾಯಕರು ಮತ್ತು ವೈದ್ಯಕೀಯ ತಜ್ಞರು ಅವಲಂಬಿತರಾಗಿದ್ದಾರೆ. ಪ್ರಮುಖ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ತಂತ್ರಗಳು ಪರಿಣಾಮಕಾರಿ ಎಂಬುದು ಐತಿಹಾಸಿಕವಾಗಿಯೂ ಸಾಬೀತಾಗಿರುವ ಅಂಶ. ಆದಾಗ್ಯೂ, ನೂತನ ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಇಂತಹ ಕ್ರಮಗಳ ಪರಿಣಾಮಗಳ ಕುರಿತು ಅಮೆರಿಕದ ತಜ್ಞರು ಈಗಲೂ ಅಪನಂಬಿಕೆ ಹೊಂದಿದ್ದಾರೆ.
ಆದರೆ, ಜಗತ್ತಿನಾದ್ಯಂತ ಎಲ್ಲಾ ಸರ್ಕಾರಗಳ ಪ್ರಮುಖ ಗುರಿಯೇ ಇದಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಎನ್‌ಪಿಐ ಅನುಸರಿಸುವ ಮೂಲಕ ಕೋವಿಡ್-19 ಪ್ರಕರಣಗಳ ಏರಿಕೆ ಗತಿಯನ್ನು ನಿಶ್ಚಲಗೊಳಿಸುವುದು ಅವುಗಳ ಉದ್ದೇಶವಾಗಿದೆ. ವೈಯಕ್ತಿಕ ಕ್ರಿಯೆಗಳಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಕೈಗಳನ್ನು ನಿಯಮಿತವಾಗಿ ತೊಳೆದುಕೊಳ್ಳುವುದು, ಕಾಯಿಲೆ ಪೀಡಿತರಾಗಿದ್ದರೆ ಮನೆಯೊಳಗೇ ಇರುವುದು, ಪ್ರಯಾಣ, ಸಮಾರಂಭ, ಒಳಾಂಗಣ ಸೇರುವಿಕೆ ಸ್ಥಳಗಳಾದ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸುವ ಚಟುವಟಿಕೆಗಳು ಎನ್‌ಪಿಐನಲ್ಲಿ ಸೇರಿವೆ.
ಇಂತಹ ಕ್ರಮಗಳನ್ನು ಅನುಸರಿಸುವ ಮೂಲಕ ನೂತನ ಕೊರೊನಾ ವೈರಸ್ ಸಾಂಕ್ರಾಮಿಕದ ಹರಡುವಿಕೆ ಪ್ರಮಾಣವನ್ನು ನಿಶ್ಚಲಗೊಳಿಸುವುದು ಅದರ ಗುರಿ. ಎನ್‌ಪಿಐ ನೀತಿ ಅನುಸರಿಸುವುದರಿಂದ ಆಸ್ಪತ್ರೆಯ ಚಿಕಿತ್ಸಾ ಸಾಮರ್ಥ್ಯ ಹೆಚ್ಚಿಸಲು ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೇಕಾದ ಔಷಧಿ ಅಥವಾ ಲಸಿಕೆಗಳನ್ನು ದಾಸ್ತಾನು ಮಾಡಿಕೊಳ್ಳುವುದಕ್ಕೆ ಸರ್ಕಾರಗಳಿಗೆ ಸಮಯ ಸಿಗುತ್ತದೆ. ಆದರೆ, ಈ ವಿಧಾನಗಳು ಅತ್ಯಧಿಕ ಸಾಮಾಜಿಕ ಹಾಗೂ ಆರ್ಥಿಕ ವೆಚ್ಚಗಳೊಂದಿಗೆ ಬರುತ್ತವೆ. ಜನರ ಮೇಲೆ ಇವು ಪ್ರತಿಕೂಲ ಪರಿಣಾಮಗಳನ್ನು ಹೊಂದಿದಾಗ್ಯೂ, ನೂತನ ಕೊರೊನಾ ವೈರಸ್ ಸಾಂಕ್ರಾಮಿಕ ತಡೆಗಟ್ಟಲು ವೈದ್ಯಕೀಯ ತಜ್ಞರು ಮುಖ ಮಾಡುವುದು ಎನ್‌ಪಿಐ ವಿಧಾನಗಳತ್ತಲೇ..
ಮೆಸ್ಸಾಚುಸೆಟ್ಸ್, ಬೋಸ್ಟನ್‌ನ ಹಾರ್ವರ್ಡ್ ಟಿ ಹೆಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಾಂಕ್ರಾಮಿಕ ರೋಗಗಳ ಚಲನಶೀಲತೆ ಕೇಂದ್ರದ ನಿರ್ದೇಶಕ ಮಾರ್ಕಸ್ ಲಿಪ್‌ಸಿಚ್ ಪ್ರಕಾರ, “ರೋಗ ಹರಡದಂತೆ ಸದ್ಯಕ್ಕೆ ಉಳಿದಿರುವ ಏಕೈಕ ಮಾರ್ಗವೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಾತ್ರ”. ಯಾಕೆಂದರೆ, ವಿಸ್ತೃತ ಪರೀಕ್ಷೆಗಳನ್ನು ನಡೆಸುವ ಹಾಗೂ ಸೋಂಕಿನ ಮೂಲ ಪತ್ತೆ ಮಾಡುವ ಮೂಲಕ ರೋಗದ ಪ್ರಾರಂಭದ ಹೆಜ್ಜೆಗಳನ್ನು ಗುರುತಿಸಲು ಇದ್ದ ಅವಕಾಶಗಳು ಈಗಾಗಲೇ ಮುಗಿದುಹೋಗಿವೆ. ಅಮೆರಿಕನ್ ಪಬ್ಲಿಕ್ ಹೆಲ್ತ್ ಅಸೋಸಿಯೇಶನ್ ಮತ್ತು ನ್ಯಾಶನಲ್ ಅಕಾಡೆಮಿ ಆಫ್ ಮೆಡಿಸಿನ್ ಇದೇ ಮಾರ್ಚ್ 25ರಂದು ಹಮ್ಮಿಕೊಂಡಿದ್ದ ಟೆಲಿಕಾನ್ಫ್‌ರೆನ್ಸ್‌ನಲ್ಲಿ ಮಾತನಾಡಿದ ಲಿಪ್‌ಸಿಚ್, “ಈಗ ಹಿಂತಿರುಗಿ ನೋಡುವುದಕ್ಕಿಂತ ಮುಂದೆ ನೋಡಲು ನಾನು ಬಯಸುತ್ತೇನೆ. ಯಾಕೆಂದರೆ, ಹಿಂದೆ ನೋಡುವುದು ನನ್ನನ್ನು ದುಃಖಿತನನ್ನಾಗಿ ಮಾಡುತ್ತದೆ” ಎಂದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಎಲ್ಲರ ಮೇಲೂ- ಮುಖ್ಯವಾಗಿ ಬಡಜನರ ಮೇಲೆ- ದುಷ್ಪರಿಣಾಮಗಳನ್ನು ಬೀರುವಂತಹದಾಗಿದ್ದರೂ ಪ್ರಯತ್ನಿಸಬಹುದಾದ ಏಕೈಕ ಪರ್ಯಾಯ ಮಾರ್ಗ ಅದು ಎನ್ನುತ್ತಾರೆ ಲಿಪ್‌ಸಿಚ್. “ನಾವೇನಾದರೂ ಸಮಯವನ್ನು ಹಾಳು ಮಾಡಿದರೆ ಅಥವಾ ಪ್ರಯೋಗ ನಡೆಸಲು ತಡ ಮಾಡಿದರೆ, ವೈಯಕ್ತಿಕ ಸುರಕ್ಷತಾ ಸಾಧನಗಳಿಗಾಗಿ, ವೆಂಟಿಲೇಟರ್‌ಗಳಿಗಾಗಿ, ತೀವ್ರ ನಿಗಾ ಚಿಕಿತ್ಸಾ ಹಾಸಿಗೆಗಳಿಗಾಗಿ, ನಾವು ಮಾಡಬೇಕಾದ ಕೆಲಸಗಳಿವು ಎಂದು ನಮಗೆ ಗೊತ್ತಿರುವ ಎಲ್ಲವನ್ನೂ ಮಾಡದೇ ಹೋದ ಪಕ್ಷದಲ್ಲಿ, ಅದು ನಮ್ಮನ್ನು ಇನ್ನಷ್ಟು ದುರಂತಕ್ಕೀಡು ಮಾಡುತ್ತದೆ” ಎಂದು ಎಚ್ಚರಿಸಿದ್ದಾರೆ.
ಎನ್‌ಪಿಐ ವಿಧಾನಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ವಿಶ್ವಾಸ ಹೊಂದಿರುವ ನ್ಯಾಶನಲ್ ಸೆಂಟರ್ ಫಾರ್ ಇಮ್ಯುನೈಝೇಶನ್ ಅಂಡ್ ರೆಸ್ಪಿರೇಟರಿ ಡಿಸೀಜಿಸ್‌ನ (ರಾಷ್ಟ್ರೀಯ ಲಸಿಕೆ ಮತ್ತು ಉಸಿರಾಟ ರೋಗಗಳ ಕೇಂದ್ರ) ಸೆಂಟರ್ಸ್ ಫಾರ್ ಡಿಸೀಜ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ಸ್‌ನ (ರೋಗಗಳ ನಿಯಂತ್ರಣ ಮತ್ತು ತಡೆ ಕೇಂದ್ರ) ನಿರ್ದೇಶಕ ನ್ಯಾನ್ಸಿ ಮೆಸೋನೀರ್ ಅವರು, “ಇವು ಕೆಲಸ ಮಾಡುತ್ತವೆ ಎಂಬುದನ್ನು ನಾವು ಬಲ್ಲೆವು” ಎಂದು ತಮ್ಮ ದೂರವಾಣಿ ಸಂದೇಶದಲ್ಲಿ ಹೇಳಿದ್ದಾರೆ. “ಎಲ್ಲಾ ರೀತಿಯ ಔಷಧಿಯೇತರ ಕ್ರಮಗಳ ಎಲ್ಲಾ ರೀತಿಯ ಸಾರಾಂಶವನ್ನು ಪರಿಶೀಲಿಸುವುದು ಮುಖ್ಯ. ಸರಿಯಾದ ಸಮಯದಲ್ಲಿ ಸೂಕ್ತ ಕ್ರಮಗಳನ್ನು ನಾವು ಬಳಸುತ್ತಿದ್ದೇವೆ ಎಂಬುದರ ಬಗ್ಗೆ ಖಚಿತತೆ ಹೊಂದಬೇಕಿದೆ” ಎನ್ನುತ್ತಾರೆ ಅವರು.