ನವದೆಹಲಿ: 2000-01ರಲ್ಲಿ ರಕ್ಷಣಾ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿಗೆ ಸಿಬಿಐನ ವಿಶೇಷ ನ್ಯಾಯಾಲಯ ನಾಲ್ಕು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿಗೆ ನಾಲ್ಕು ವರ್ಷ ಜೈಲು ಶಿಕ್ಷೆ - ಜಯಾ ಜೇಟ್ಲಿ
ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಹಾಗೂ ಮತ್ತಿಬ್ಬರಿಗೆ ದೆಹಲಿಯ ಸಿಬಿಐ ಕೋರ್ಟ್ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
2001ರ ಜನವರಿ ತಿಂಗಳಲ್ಲಿ ರಕ್ಷಣಾ ಒಪ್ಪಂದದಲ್ಲಿ ನಡೆದಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್ ಪೋರ್ಟಲ್‌ವೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಹಗರಣ ಬೆಳಕಿಗೆ ಬಂದಿತ್ತು. ಸೇನೆಗೆ ಥರ್ಮಲ್ ಇಮೇಜರ್ ಪೂರೈಸುವ ಡೀಲ್ ಪಡೆದುಕೊಳ್ಳಲು ಜೇಟ್ಲಿ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬ ಗಂಭೀರ ಆರೋಪವಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶ ವೀರೇಂದ್ರ ಭಟ್, 1988ರ ಸೆಕ್ಷನ್ 9ರ ಕ್ರಿಮಿನಲ್ ಪ್ರಕರಣದಡಿ ಆರೋಪಿ ಜಯಾ ಜೇಟ್ಲಿ ಹಾಗೂ ಅವರ ಸಹೋದ್ಯೋಗಿಗಳಾಗಿದ್ದ ಗೋಪಾಲ್ ಮತ್ತು ನಿವೃತ್ತ ಜನರಲ್ ಎಸ್ಪಿ ಮುರ್ಗೈಗೆ ಸಂಜೆ 5ರೊಳಗೆ ಶರಣಾಗುವಂತೆ ತಿಳಿಸಿದ್ದು, 1 ಲಕ್ಷ ರೂ ದಂಡ ವಿಧಿಸಿದೆ.