ನವದೆಹಲಿ:ಕೋವಿಡ್-19 ಸೋಂಕಿನ ಬಗ್ಗೆ ಎಚ್ಚರ ವಹಿಸಿರುವ ಭಾರತದ ಚಿಕಿತ್ಸಾ ವಿಧಾನ ಮತ್ತು ವೈದ್ಯರು ನಡೆಸಿಕೊಳ್ಳುವ ರೀತಿಯನ್ನು ಚೀನಾದ ಪ್ರಜೆಯೊಬ್ಬರು ಮೆಚ್ಚಿಕೊಂಡು ಪತ್ರದ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಚಿನಾದ ಪ್ರಜೆಯೊಬ್ಬರು ಕೋವಿಡ್ ಸೋಂಕಿನ ಭೀತಿಯಿಂದ ಮಹಾರಾಷ್ಟ್ರದ ಪುಣೆಯಲ್ಲಿರುವ ನಾಯ್ಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಇಲ್ಲಿಯವರೆಗೆ ದೃಢವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಈ ವ್ಯಕ್ತಿ ಇಂಗ್ಲಿಷ್ ಮತ್ತು ಚೀನಾ ಭಾಷೆಯಲ್ಲಿ ಬರೆದಿರುವ ಪತ್ರವನ್ನು ಕೇಂದ್ರ ಆರೋಗ್ಯ ಸಚಿವಾಲಯ ದ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದೆ. 'ಅಚಾನಕ್ ಆಗಿ ಅನಾರೋಗ್ಯಕ್ಕೆ ತುತ್ತಾದ ಕಾರಣ ನಾನು ಭಾರತದ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ಮೊದ ಮೊದಲು ಭಾರತೀಯ ಭಾಷೆ ಮತ್ತು ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ನನಗೆ ಭಯ ಉಂಟಾಗಿತ್ತು' ಎಂದು ಅವರು ಬರೆದಿದ್ದಾರೆ.
ಭಾರತೀಯ ವೈದ್ಯಕೀಯ ಸೇವೆ ಮೆಚ್ಚಿ ಪತ್ರ ಬರೆದ ಚೀನಾ ಪ್ರಜೆ
'ಆಸ್ಪತ್ರೆಗೆ ಬಂದಾಗಲೂ ನನಗೆ ಭಯ ಕಾಡುತ್ತಿತ್ತು. ಆದರೆ ಇಲ್ಲಿನ ವೈದ್ಯರ ವರ್ತನೆ ಉತ್ತಮವಾಗಿತ್ತು. ಚೀನಾದ ವ್ಯಕ್ತಿಗಳನ್ನೂ ಉತ್ತಮವಾಗಿ ನಡೆಸಿಕೊಳ್ಳುತ್ತಿದ್ದಾರೆ' ಎಂದು ಆಸ್ಪತ್ರೆಯ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ, ಧನ್ಯವಾದ ತಿಳಿಸಿದ್ದಾರೆ.