ನವದೆಹಲಿ: ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯ ನಡೆಸಿದ ದಡ್ಡತನದ ಕೃತ್ಯಗಳು ಮನುಕುಲದ ಉಳಿವಿಗೆ ಹಲವಾರು ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಕೈಗಾರೀಕರಣದಿಂದ ಉಂಟಾದ ಮಾಲಿನ್ಯವು ಆಕಾಶ ಮತ್ತು ಭೂಮಿ, ನೀರು ಹಾಗೂ ಮನುಷ್ಯನ ಜೀವನವನ್ನು ವಿಷಮಯವಾಗಿಸುತ್ತಿದೆ.
2008ರಲ್ಲಿ ನಡೆಸಲಾದ ಅಂತಾರಾಷ್ಟ್ರೀಯ ಅಧ್ಯಯನವೊಂದರ ಪ್ರಕಾರ, ಜಗತ್ತಿನಾದ್ಯಂತ 830 ಲಕ್ಷ ಜನ ಮಾಲಿನ್ಯದಿಂದಾಗಿ ಕೊಲ್ಲಲ್ಪಟ್ಟಿದ್ದಾರೆ ಹಾಗೂ ಈ ಪೈಕಿ 230 ಲಕ್ಷ ಜನ ಭಾರತೀಯರು. ಬಹುತೇಕ 125 ಲಕ್ಷದಷ್ಟು ಭಾರತೀಯರ ಸಾವಿಗೆ ಕೈಗಾರಿಕಾ ಮಾಲಿನ್ಯವೊಂದೇ ಮುಖ್ಯ ಕಾರಣವಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕವನ್ನು ತಡೆಗಟ್ಟುವ ತಂತ್ರದ ನಿಮಿತ್ತ ಈಗ ದೇಶಾದ್ಯಂತ ದಿಗ್ಬಂಧನ ಜಾರಿಗೊಳಿಸಿದ್ದರಿಂದ, ಕೈಗಾರಿಕಾ ಚಟುವಟಿಕೆಗಳು ಸ್ಥಗಿತವಾಗಿದ್ದು, ಅಚ್ಚರಿ ಮೂಡಿಸುವ ರೀತಿ ನಮ್ಮ ವಾತಾವರಣವು ಗುಣಮಟ್ಟ ಹಾಗೂ ಪರಿಶುದ್ಧತೆಯನ್ನು ಪಡೆದುಕೊಂಡಿದೆ. ನದಿಗಳಿಗೆ ವಿಷಕಾರಿ ತ್ಯಾಜ್ಯ ಸೇರ್ಪಡೆ ನಿಂತಿರುವುದರಿಂದ, ಅವು ಸ್ವಚ್ಛ ನೀರಿನಿಂದ ಹರಿಯುವಂತಾಗಿದೆ ಎಂದು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ದೃಢೀಕರಣ ನೀಡಿದೆ.
ಮೂರೂವರೆ ದಶಕಗಳ ಹಿಂದೆ ಕೇಂದ್ರ ಸರಕಾರ ತನ್ನ ಮಹತ್ವದ ಗಂಗಾ ನದಿ ಶುದ್ಧೀಕರಣ ಯೋಜನೆಯನ್ನು ಪ್ರಕಟಿಸಿತ್ತು. ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಗಳಾಗಿದ್ದ ಅವಧಿಯಲ್ಲಿ, 4 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಇದರಿಂದ ಯಾವುದೇ ಪರಿಣಾಮ ಉಂಟಾಗದಿದ್ದ ಹಿನ್ನೆಲೆಯಲ್ಲಿ ಮೋದಿ ಸರಕಾರವು “ನಮಾಮಿ ಗಂಗಾ” ಎಂಬ ಬೃಹತ್ ಯೋಜನೆಯನ್ನು 2014ರಲ್ಲಿ ಪ್ರಾರಂಭಿಸಿತು. ರೂ.28,790 ಕೋಟಿ ವೆಚ್ಚದಲ್ಲಿ, 310 ಯೋಜನೆಗಳ ಮೂಲಕ, ಈ ವರ್ಷಾಂತ್ಯದ ವೇಳೆಗೆ ಅದನ್ನು ಪೂರ್ಣಗೊಳಿಸಲು ಉದ್ದೇಶಿಸಿತ್ತು. ಅದಾಗ್ಯೂ, ಕೇವಲ ಶೇಕಡಾ 37ರಷ್ಟು ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ.
ಗಂಗಾ ನದಿಯನ್ನು ಶುದ್ಧೀಕರಿಸುವ ನಿಮಿತ್ತ ಕೊಳಚೆ ನೀರನ್ನು ಶುದ್ಧಗೊಳಿಸುವ ಯೋಜನೆಗಳನ್ನು ಸರಕಾರ ವ್ಯಾಪಕವಾಗಿ ಕೈಗೊಂಡಿದ್ದಾಗ್ಯೂ, ಅದ್ಯಾವುದರ ಹಂಗಿಲ್ಲದೇ ತಾನು ಶುದ್ಧಗೊಳ್ಳಬಲ್ಲೆ ಎಂಬುದನ್ನು ಗಂಗೆ ತಾನೇ ತೋರಿಸಿಕೊಟ್ಟಿದ್ದಾಳೆ! ಕೈಗಾರಿಕಾ ಮಾಲಿನ್ಯ ಇಲ್ಲದಿರುವುದರಿಂದ ನಮ್ಮ ಪ್ರಮುಖ ನದಿಗಳೆಲ್ಲವೂ ತಂತಾನೇ ಶುದ್ಧೀಕರಣಗೊಳ್ಳುವ ಮೂಲಕ, ನದಿ ನೀರನ್ನು ಶುದ್ಧೀಕರಿಸುವ ತಂತ್ರಗಾರಿಕೆಯನ್ನು ನಾವು ಬದಲಿಸಿಕೊಳ್ಳಬೇಕಿದೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿವೆ.