ಗಾಂಧಿನಗರ: ವನ್ಯಜೀವಿ ಮತ್ತು ಅವುಗಳ ಆವಾಸಸ್ಥಾನದ ಸಂರಕ್ಷಣೆ ಭಾರತದ ಸಾಂಸ್ಕೃತಿಕ ನೀತಿಯ ಒಂದು ಭಾಗವಾಗಿದೆ. ಇದು ಸಹಾನುಭೂತಿ ಮತ್ತು ಸಹಬಾಳ್ವೆ ಉತ್ತೇಜಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತಿನ ಗಾಂಧಿನಗರದಲ್ಲಿ ವನ್ಯ ಜೀವಿ ವಲಸೆ ಪ್ರಬೇಧಗಳ ಸಂರಕ್ಷಣೆ ಸಮಾವೇಶ ಉದ್ದೇಶಿಸಿ ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಮಾತನಾಡಿದ ಅವರು, 'ವನ್ಯಜೀವಿ ಮತ್ತು ಆವಾಸಸ್ಥಾನಗಳ ಸಂರಕ್ಷಣೆ ನಮ್ಮ ಸಾಂಸ್ಕೃತಿಕ ನೀತಿಯ ಒಂದು ಭಾಗ. ಇದು ಸಹಾನುಭೂತಿ ಮತ್ತು ಸಹಬಾಳ್ವೆ ಉತ್ತೇಜಿಸುತ್ತದೆ. ನಮ್ಮ ವೇದಗಳಲ್ಲೂ ಪ್ರಾಣಿಗಳ ರಕ್ಷಣೆಯ ಬಗ್ಗೆ ಹೇಳಲಾಗಿದೆ. ಅಶೋಕ ಚಕ್ರವರ್ತಿ ಕೂಡ ಕಾಡುಗಳ ನಾಶ ಮತ್ತು ಪ್ರಾಣಿಗಳ ಹತ್ಯೆ ತಡೆಗಟ್ಟಲು ಹೆಚ್ಚಿನ ಒತ್ತು ನೀಡಿದ್ದರು' ಎಂದಿದ್ದಾರೆ.
ವನ್ಯ ಜೀವ ವಲಸೆ ಪ್ರಬೇಧಗಳ ಸಂರಕ್ಷಣೆ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ.. ಭಾರತವು ವೈವಿಧ್ಯಮಯ ಪರಿಸರ ಆವಾಸಸ್ಥಾನ ಮತ್ತು 4 ಜೈವಿಕ ವೈವಿಧ್ಯತೆಯ ತಾಣ ಹೊಂದಿದೆ. ವಿಶ್ವದ ಭೂಪ್ರದೇಶದ ಶೇ.2.4 ರಷ್ಟಿರುವ ಭಾರತವು ವಿಶ್ವದ ಪ್ರಸಿದ್ಧ ಜೈವಿಕ ವೈವಿಧ್ಯತೆಗಳಲ್ಲಿ ಸುಮಾರು 8ರಷ್ಟು ಕೊಡುಗೆ ನೀಡುತ್ತದೆ. ಪೂರ್ವ ಹಿಮಾಲಯ, ಪಶ್ಚಿಮ ಘಟ್ಟ, ಇಂಡೋ-ಮ್ಯಾನ್ಮಾರ್ ಭೂದೃಶ್ಯ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳುನ್ನ ಹೊಂದಿದೆ ಎಂದಿದ್ದಾರೆ.
ಭಾರತವು ಜಗತ್ತಿನಾದ್ಯಂತ ಇರುವ ಸುಮಾರು 500 ಜಾತಿಯ ವಲಸೆ ಪಕ್ಷಿಗಳಿಗೆ ನೆಲೆ. ಗಾಂಧೀಜಿ ಅವರಿಂದ ಪ್ರೇರಿತರಾಗಿ ಅಹಿಂಸೆ ಮತ್ತು ಪ್ರಾಣಿಗಳು ಮತ್ತು ಪ್ರಕೃತಿಯ ರಕ್ಷಣೆ ನೀತಿಗಳನ್ನು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.