ನವದೆಹಲಿ:ದೇಶದ ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿರುವ ವಲಸೆ ಕಾರ್ಮಿಕರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳು ಮರಳಿ ತವರು ರಾಜ್ಯಗಳಿಗೆ ಹೋಗಲು ಈಗಾಗಲೇ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದರ ಮಧ್ಯೆ ರೈಲುಗಳಲ್ಲಿ ಹೆಚ್ಚಿನ ಟಿಕೆಟ್ ದರ ನಿಗದಿಪಡಿಸಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಇದೇ ವಿಷಯವಾಗಿ ಮಾತನಾಡಿರುವ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ದೇಶದಲ್ಲಿ ಹೇರಿಕೆ ಮಾಡಿರುವ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಗುರಿಯಾಗಿರುವ ವಲಸಿಗರನ್ನು ಮನೆ ತಲುಪಿಸುವಲ್ಲಿ ಕೇಂದ್ರ ಸರ್ಕಾರ ಮಾನವೀಯತೆ ಮರೆತಿದ್ದು, ಕಾರ್ಮಿಕರ ರೈಲ್ವೆ ಟಿಕೆಟ್ ದರ ಭರಿಸಲು ಕಾಂಗ್ರೆಸ್ ಸಿದ್ಧವಾಗಿದೆ ಎಂದಿದ್ದಾರೆ.
ವಲಸೆ ಕಾರ್ಮಿಕರಿಂದ ಇಷ್ಟೊಂದು ಮಟ್ಟದ ಹಣ ವಸೂಲಿ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಇದೀಗ ನಾಚಿಕೆಯಾಗಬೇಕು ಎಂದಿರುವ ಅವರು, ವಿದೇಶದಲ್ಲಿ ಸಂಕಷ್ಟದಲ್ಲಿದ್ದ ಭಾರತೀಯರನ್ನ ಉಚಿತವಾಗಿ ಕರೆತಂದಿರುವಾಗ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳುತ್ತಿರುವ ವಲಸೆ ಕಾರ್ಮಿಕರ ಬಳಿ ಇಷ್ಟೊಂದು ಹಣ ವಸೂಲಿ ಮಾಡಲು ಕಾರಣ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಗುಜರಾತ್ನಲ್ಲಿ ಆಯೋಜನೆಗೊಂಡಿದ್ದ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 100 ಕೋಟಿ ರೂ. ನೀಡಿದೆ. ಪಿಎಂ ಕೇರ್ಸ್ ನಿಧಿಗೆ ರೈಲ್ವೆ ಇಲಾಖೆ 151 ಕೋಟಿ ರೂ. ನೀಡಿದೆ. ಆದರೆ ವಲಸೆ ಕಾರ್ಮಿಕರನ್ನು ಉಚಿತವಾಗಿ ಮನೆ ತಲುಪಿಸಲು ಕೇಂದ್ರಕ್ಕೆ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.