ನವದೆಹಲಿ:ನೊವೆಲ್ ಕೊರೊನಾ ವೈರಸ್ ಅನ್ನು ತಡೆಯಲು ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿ ಇಂದಿಗೆ ಮೂರು ದಿನ ಕಳೆದಿದೆ. ಜನ ಕೆಲಸ ಇಲ್ಲದ ಪರಿಣಾಮ ತಮ್ಮ ಸ್ವಂತ ಗೂಡು ಸೇರಿಕೊಳ್ಳಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಸಂಬಂಧ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಯಾರೆಲ್ಲಾ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ ಅವರ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.
ಅವರ ಪತ್ರದಲ್ಲಿ ಸಾರಾಂಶ ಹೀಗಿದೆ.
ದೇಶಾದ್ಯಂತ ಲಾಕ್‌ಡೌನ್ ಆಗಿರುವ ಪರಿಣಾಮ ಪ್ರಸ್ತುತ ಬಡ ಜನರು ತಮ್ಮ ಊರುಗಳಿಗೆ ನಡೆದುಕೊಂಡು ಹೋಗುತ್ತಿದ್ದಾರೆ. ಈ ವಿಚಾರ ಸಂಬಂಧ ನಾನು ನಿಮ್ಮ(ಪ್ರಧಾನಿ ನರೇಂದ್ರ ಮೋದಿ) ಗಮನ ಸೆಳೆಯಲು ಬಯಸುತ್ತೇನೆ.
ಸಾರಿಗೆ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ವಲಸಿಗ ಕಾರ್ಮಿಕರು ನೂರಾರು ಮೈಲಿ ನಡೆದು ತಮ್ಮ ಊರುಗಳತ್ತ ಸಾಗುತ್ತಿದ್ದಾರೆ. ಕೆಲವರು ವಸತಿ ಗೃಹಗಳು ಅಥವಾ ಹೋಟೆಲ್‌ಗಳಲ್ಲಿ ಸಿಕ್ಕಿಹಾಕಿಕೊಂಡು ಹಣ ಕೊಡಲಾರದೇ ಅಲ್ಲಿಂದ ಹೊರ ಬರುತ್ತಿದ್ದಾರೆ. ಲಾಕ್‌ಡೌನ್‌ನಿಂದ ದೇಶದ ಹಲವು ಮಂದಿ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯಾರೆಲ್ಲಾ ಪ್ರಯಾಣ ಮಾಡ್ತಿದ್ದಾರೋ ಅಂತವರಿಗೆ ಸೂಕ್ತ ನೆರವು ನೀಡಬೇಕು. ಇದು ನನ್ನ ಮನಃಪೂರ್ವಕವಾದ ಮನವಿಯಾಗಿದೆ ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ಎರಡು ಸಲಹೆಗಳನ್ನು ನೀಡಿದ್ದಾರೆ.