ನವದೆಹಲಿ:ಬಿಜೆಪಿ ಅಧಿಕಾರಕ್ಕೆ ಬಂದ ಕಳೆದ ಆರು ವರ್ಷಗಳಲ್ಲಿ ಭಾರತೀಯ ರಾಜಕೀಯ ರಂಗದಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ನಿರಂತರವಾಗಿ ಕೆಳ ಮುಖವಾಗುತ್ತಿದೆ. ಇದನ್ನು ಉತ್ತರ ಪ್ರದೇಶದ 10 ಸಂಸದರು ಮತ್ತು ಉತ್ತರಾಖಂಡದಿಂದ ರಾಜ್ಯಸಭೆಗೆ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯು ಎತ್ತಿ ತೋರಿಸಿದೆ.
ಹೊಸ ಸಂಸದರ ಚುನಾವಣೆಯ ನಂತರ, ಮೇಲ್ಮನೆಯಲ್ಲಿ ಕಾಂಗ್ರಸ್ ಸಂಖ್ಯೆ 40 ರಿಂದ 38 ಕ್ಕೆ ಇಳಿದಿದೆ. 2014 ರಿಂದ ಸತತ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಸೋತ ಕಾಂಗ್ರೆಸ್ ಪಕ್ಷವು 51 ಲೋಕಸಭಾ ಸಂಸದರನ್ನು ಹೊಂದಿದೆ. ಆದರೆ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಹರಿಯಾಣ, ದೆಹಲಿ, ರಾಜಸ್ಥಾನ, ಗುಜರಾತ್, ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ, ತ್ರಿಪುರ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಮಣಿಪುರ ರಾಜ್ಯಗಳಿಂದ ಒಂದೇ ಒಂದು ಸ್ಥಾನವನ್ನೂ ಹೊಂದಿಲ್ಲ. ಇಷ್ಟು ಸಾಲದು ಎಂಬಂತೆ ಸೋಮವಾರ, ಉತ್ತರಪ್ರದೇಶದಿಂದ ಚುನಾಯಿತರಾದ 8 ಸದಸ್ಯರು ಬಿಜೆಪಿಗೆ ಸೇರಿದವರಾಗಿದ್ದು, ಉಳಿದ ಒಬ್ಬರು ಸಮಾಜವಾದಿ ಪಕ್ಷ ಮತ್ತೊಬ್ಬರು ಬಿಎಸ್ಪಿಗೆ ಸೇರಿದವರಾಗಿದ್ದಾರೆ. ನಿನ್ನೆಯ ಚುನಾವಣೆಯಲ್ಲಿ ಒಬ್ಬನೇ ಒಬ್ಬ ಸದಸ್ಯನನ್ನು ರಾಜ್ಯಸಭೆಗೆ ಕಳಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.
ನವೆಂಬರ್ 25 ರಂದು ನಿವೃತ್ತಿ ಹೊಂದುತ್ತಿರುವ ಉತ್ತರ ಪ್ರದೇಶದ 10 ರಾಜ್ಯಸಭಾ ಸದಸ್ಯರಲ್ಲಿ ಬಿಜೆಪಿಯ ಮೂವರು ಸೇರಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಅರುಣ್ ಸಿಂಗ್ ಮತ್ತು ನೀರಜ್ ಶೇಖರ್, ಎಸ್ಪಿ ಯಿಂದ ನಾಲ್ವರು - ಚಂದ್ರಪಾಲ್ ಸಿಂಗ್ ಯಾದವ್, ರಾಮ್ ಗೋಪಾಲ್ ಯಾದವ್, ರಾಮ್ ಪ್ರಕಾಶ್ ವರ್ಮಾ, ಮತ್ತು ಜಾವೇದ್ ಅಲಿ ಖಾನ್, ಬಿಎಸ್ಪಿಯಿಂದ ಇಬ್ಬರು - ರಾಜಾರಾಮ್ ಮತ್ತು ವೀರ್ ಸಿಂಗ್, ಮತ್ತು ಕಾಂಗ್ರೆಸ್ ನ ಪಿಎಲ್ ಪುನಿಯಾ. ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಉತ್ತರಾಖಂಡದಿಂದ ರಾಜ್ಯಸಭಾ ಸದಸ್ಯರಾಗಿ ನಿವೃತ್ತರಾಗುತ್ತಿದ್ದಾರೆ. ಈ ಸ್ಥಾನವನ್ನು ಬಿಜೆಪಿಯ ನರೇಶ್ ಬನ್ಸಾಲ್ ಪಡೆದುಕೊಂಡಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ನೀರಜ್ ಶೇಖರ್, ಅರುಣ್ ಸಿಂಗ್ ಮತ್ತು ರಾಮ್ ಗೋಪಾಲ್ ಯಾದವ್ ಅವರನ್ನು ಬಿಜೆಪಿ ಸದಸ್ಯರಾಗಿ ಮತ್ತೆ ಮೇಲ್ಮನೆಗೆ ಆಯ್ಕೆ ಮಾಡಲಾಗಿದೆ.