ನವದೆಹಲಿ: ಪ್ರಪಂಚದಲ್ಲಿ ಸಹಕಾರಿ ಸಂಘಗಳು ಆರಂಭವಾದ ಬಳಿಕ ಸಮಾಜದಲ್ಲಿನ ಆರ್ಥಿಕ ಬಲವರ್ಧನೆ ಸಾಧ್ಯವಾಗುತ್ತಾ ಬಂದಿದೆ. ಅಲ್ಲದೆ ಹತ್ತು ಹಲವು ವಲಯಗಳಲ್ಲಿ ಸಹಕಾರಿ ಸಂಘಗಳಿಂದು ತಮ್ಮದೇ ಕೊಡುಗೆ ನೀಡುತ್ತಿವೆ ಆದರೆ ಸಹಕಾರಿ ಸಂಘಗಳು ಹುಟ್ಟಿದ್ದು ಮಾತ್ರ ದಶಕಗಳ ಹಿಂದೆ ಎಂಬುದು ಸ್ವಾರಸ್ಯಕರ ಸಂಗತಿಯಾಗಿದೆ.
19 ನೇ ಶತಮಾನದ ಮೊದಲಾರ್ಧದಲ್ಲಿ, ಪಶ್ಚಿಮ ಯುರೋಪ್, ಉತ್ತರ ಅಮೆರಿಕಾ ಮತ್ತು ಜಪಾನ್‌ನಲ್ಲಿ ಸಹಕಾರ ಸಂಘಗಳು ಸಣ್ಣ ತಳಮಟ್ಟದ ಸಂಘಟನೆಗಳಾಗಿ ಪ್ರಾರಂಭವಾದ ಅನೇಕ ದಾಖಲೆಗಳಿವೆ. ಅಲ್ಲದೆ ಕೈಗಾರಿಕೆ ಮತ್ತು ಸೇವಾ ವಲಯಗಲ್ಲಿ ಸಹಕಾರವು ಯುರೋಪಿನಲ್ಲಿ ಸುಮಾರು 19ನೇ ಶತಮಾನದಿಂದಲೂ ಸಕ್ರಿಯವಾಗಿದೆ. ಮೊದಲ ಬಾರಿಗೆ 1833ರಲ್ಲಿ ಪ್ಯಾರಿಸ್ನ ಆಭರಣ ವ್ಯಾಪಾರಿಗಳು ಸಹಕಾರಿ ಸಂಘವನ್ನು ಸ್ಥಾಪಿಸಿದ್ದಾರೆ ಎಂಬ ದಾಖಲೆಯಿದೆ.
ಇದಲ್ಲದೆ, 1844ರಲ್ಲಿ ಉತ್ತರ ಇಂಗ್ಲೆಂಡ್ನ ರೋಚ್ಡೇಲ್ ಪಟ್ಟಣದ ಕಾಟನ್ ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ 28 ಕಾರ್ಮಿಕರ ಗುಂಪು ಸೇರಿ ರೋಚ್ಡೇಲ್ ಈಕ್ವಿಟಬಲ್ ಪಯೋನಿಯರ್ಸ್ ಸೊಸೈಟಿಯನ್ನು ಸ್ಥಾಪಿಸಿತು. ಇದು ಕಾರ್ಮಿಕರ ಏಳಿಗೆ ಹಾಗೂ ಅವರ ಶ್ರೇಯೋಭಿವೃದ್ಧಿಯ ಕಾರ್ಯ ಮಾಡುವಲ್ಲಿ ಮುಂದಾಯಿತು. ಇದಾದ ಬಳಿಕ ಸಹಕಾರಿ ಸಂಘಗಳ ಆಂದೋಲನವೇ ಆರಂಭವಾಯಿತು. 19ನೇ ಶತಮಾನದ ಅಂತ್ಯ ಮತ್ತು 20ನೇ ಶತಮಾನ ಆರಂಭದ ಮಧ್ಯ ಭಾಗದಲ್ಲಿ ಕಾರ್ಮಿಕರ ಸಹಕಾರಿ ಸಂಘಗಳು ಯುರೋಪ್ ಖಂಡದಾದ್ಯಂತ ಹರಡಿದ್ದವು. ಬಳಿಕ ಪ್ರಪಂಚದ ಉಳಿದ ಭಾಗಗಳಿಗೂ ಹಬ್ಬಿದವು.
ಸ್ವಾತಂತ್ರ್ಯ ಪೂರ್ವ ಯುಗದಲ್ಲಿ ಸಹಕಾರಿ ಚಳುವಳಿ
ಭಾರತದ ಮಟ್ಟಿಗೆ ಹೇಳುವುದಾದರೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಹಕಾರಿ ಸಂಘದ ಆಂದೋಲನ ಆರಂಭವಾಗಿತ್ತು. ಪೂನಾ ಹಾಗೂ ಅಹ್ಮದ್ ನಗರದ ರೈತರು ಅತೀ ಬಡ್ಡಿದರ ವಿಧಿಸುತ್ತಿದ್ದ ಸಾಲಗಾರರ ವಿರುದ್ಧ ಆಂದೋಲನ ಹುಟ್ಟುಹಾಕಿದರು. ಇದನ್ನೂ ಸಹ ಸಹಕಾರಿ ಸಂಘಗಳು ಎಂದೇ ಕರೆಯಲಾಗಿತ್ತು.
ಇದಾದ ಬಳಿಕ ಬ್ರಿಟಿಷ್ ಸರ್ಕಾರ ಮೂರು ಕಾಯ್ದೆಗಳನ್ನು ಜಾರಿಗೆ ತಂದಿತ್ತು. 1879ರ ಕೃಷಿ ಪರಿಹಾರ ಕಾಯ್ದೆ, 1883ರ ಭೂ ಸುಧಾರಣಾ ಸಾಲ ಕಾಯ್ದೆ ಹಾಗೂ 1884ರ ಕೃಷಿ ತಜ್ಞರ ಸಾಲ ಕಾಯ್ದೆಯನ್ನು ಜಾರಿ ಮಾಡಿತು.
1919ರಲ್ಲಿ ಬ್ರಿಟಿಷ್ ಸರ್ಕಾರವು ಸಹಕಾರಿ ಸಂಘಗಳು ತಮ್ಮದೇ ಆದ ಕಾನೂನು, ನಿಯಮಗಳನ್ನು ರೂಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು.
ಸ್ವಾತಂತ್ರ್ಯೋತ್ತರ ಯುಗದಲ್ಲಿ ಸಹಕಾರಿ ಚಳುವಳಿ
ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರಿಗೆ ಸಹಕಾರಿ ಆಂದೋಲನದಲ್ಲಿ ಬಲವಾದ ನಂಬಿಕೆ ಇತ್ತು. ಆಗ್ನೇಯ ಏಷ್ಯಾದಲ್ಲಿ ಸಹಕಾರಿ ನಾಯಕತ್ವದ ಕುರಿತ ಅಂತರರಾಷ್ಟ್ರೀಯ ಸೆಮಿನಾರ್‌ನಲ್ಲಿ ಅವರು ಮಾಡಿದ ಭಾಷಣದಲ್ಲಿ,
ಪ್ರಸ್ತುತ ನನ್ನ ದೃಷ್ಟಿಕೋನವು ಸಹಕಾರಿ ಆಂದೋಲನವನ್ನು ಕ್ರಮೇಣ, ಹಂತಹಂತವಾಗಿ ಹರಡುವ ದೃಷ್ಟಿಕೋನವಲ್ಲ. ನನ್ನ ದೃಷ್ಟಿಕೋನವೆಂದರೆ ಭಾರತವನ್ನು ಸಹಕಾರಿ ಚಳವಳಿಯೊಂದಿಗೆ ಮನವೊಲಿಸುವುದು ಅಥವಾ ಅದನ್ನು ಸಹಕಾರದಿಂದ ಮಾಡುವುದು, ವಿಶಾಲವಾಗಿ ಹೇಳುವುದಾದರೆ, ಭಾರತದ ಮೂಲ ಚಟುವಟಿಕೆ, ಪ್ರತಿ ಹಳ್ಳಿಯಲ್ಲೂ ಸಹಕಾರಿ ವಿಧಾನವನ್ನು ಭಾರತದ ಸಾಮಾನ್ಯ ಚಿಂತನೆಯನ್ನಾಗಿ ಮಾಡವುದು.
ಆದ್ದರಿಂದ, ಭಾರತದ ಇಡೀ ಭವಿಷ್ಯವು ನಿಜವಾಗಿಯೂ ಇದನ್ನು ಹೇಗೆ ಪ್ರಸ್ತು ಪಡಿಸುತ್ತೇವೆ ಎಂಬುದರ ಮೇಲೆ ನಿಂತಿದೆ ಎಂದಿದ್ದರು.
ಪಂಚವಾರ್ಷಿಕ ಯೋಜನೆಯಲ್ಲೂ ಅವಿಭ್ಯಾಜ್ಯ ಅಂಗವಾದ ಸಹಕಾರ ಸಂಘಗಳು
1. 1958 ರಲ್ಲಿ, ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ಸಹಕಾರಿ ಸಂಸ್ಥೆಗಳ ಬಗ್ಗೆ ರಾಷ್ಟ್ರೀಯ ನೀತಿಯನ್ನು ಶಿಫಾರಸು ಮಾಡಿತ್ತು ಮತ್ತು ಸಿಬ್ಬಂದಿ ತರಬೇತಿ ಮತ್ತು ಸಹಕಾರಿ ಮಾರುಕಟ್ಟೆ ಸಂಘಗಳನ್ನು ಸ್ಥಾಪಿಸಲು ಶಿಫಾರಸು ಮಾಡಿತ್ತು.
2. 1984 ರಲ್ಲಿ, ಭಾರತದ ಸಂಸತ್ತು ಬಹು-ರಾಜ್ಯ ಸಹಕಾರಿ ಸಂಘಗಳ ಕಾಯ್ದೆಯನ್ನು ಜಾರಿಗೆ ತಂದಿತು.
3. ಶ್ವೇತ ಕ್ರಾಂತಿಯ ಯಶಸ್ಸಿನ ಹಿಂದೆ ಅತ್ಯಂತ ಪ್ರಮುಖವಾದ ಯಶಸ್ಸಿನ ಕಥೆಗಳು ದೇಶವನ್ನು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿಶ್ವದ ಅತಿದೊಡ್ಡ ಉತ್ಪಾದಕರನ್ನಾಗಿ ಮಾಡಿದ್ದು, ಮತ್ತು ಹಸಿರು ಕ್ರಾಂತಿ ಮತ್ತು ಹಳ್ಳಿಗಳನ್ನು ಮಾದರಿ ಗ್ರಾಮಗಳಾಗಿ ಪರಿವರ್ತಿಸುವುದು ಹಸಿರು ಕ್ರಾಂತಿಯ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಈ ಸಹಕಾರಿ ಸಂಘಗಳು ಪಡೆದುಕೊಂಡಿದೆ.
4. ಭಾರತ ಸರ್ಕಾರವು 2002ರಲ್ಲಿ ಸಹಕಾರ ಸಂಘಗಳ ಬಗ್ಗೆ ರಾಷ್ಟ್ರೀಯ ನೀತಿಯನ್ನು ಘೋಷಿಸಿತು. ರಾಷ್ಟ್ರೀಯ ನೀತಿಯ ಅಂತಿಮ ಉದ್ದೇಶವೆಂದರೆ..
- ಸಹಕಾರಿ ಸಂಸ್ಥೆಗಳ ಪ್ರಚಾರ ಮತ್ತು ಅಭಿವೃದ್ಧಿಗೆ ಬೆಂಬಲವನ್ನು ಒದಗಿಸುವುದು.
- ಪ್ರಾದೇಶಿಕ ಅಸಮತೋಲನ ಕಡಿತಗೊಳಿಸುವುದು.
- ಸಹಕಾರಿ ಶಿಕ್ಷಣ, ತರಬೇತಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಬಲಪಡಿಸುವುದು
ಭಾರತದಲ್ಲಿ ಅಸ್ತಿತ್ವದಲ್ಲಿರುವ 6 ಪ್ರಮುಖ ಸಹಕಾರ ಸಂಘಗಳನ್ನು ನೋಡುವುದಾದರೆ
- ಗ್ರಾಹಕ ಸಹಕಾರಿ ಸಂಘ
- ನಿರ್ಮಾಪಕ ಸಹಕಾರಿ ಸಂಘ
- ಸಹಕಾರಿ ಸಾಲ ಸಂಘಗಳು
- ಮಾರುಕಟ್ಟೆ ಕೋ-ಆಪರೇಟಿವ್ ಸೊಸೈಟಿ
- ವಸತಿ ಸಹಕಾರಿ ಸಂಘ
- ಸಹಕಾರಿ ಕೃಷಿ ಸಂಘಗಳು