ಬೆಂಗಳೂರು:ಯಾರೂ ಅನ್ವೇಷಿಸದ ಚಂದ್ರನ ದಕ್ಷಿಣ ಧ್ರುವವನ್ನ ಅನ್ವೇಷಿಸಲು ಹೊರಟ ಚಂದ್ರಯಾನ-2 ಒಂದು ಸಂಕೀರ್ಣವಾದ ಪ್ರಯತ್ನವಾಗಿದ್ದು, ಇದರಲ್ಲಿ ನಾವು ಶೇ. 95ರಷ್ಟು ಯಶಸ್ಸು ಸಾಧಿಸಿದ್ದೇವೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.
ಚಂದ್ರಯಾನ-2 ಒಂದು ಸಂಕೀರ್ಣವಾದ ಮಿಷನ್ ಆಗಿದ್ದು, ಈ ಹಿಂದಿನ ಇಸ್ರೋ ಮಿಷನ್ಗಳಿಗೆ ಹೋಲಿಕೆ ಮಾಡಿದರೆ ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ಗಳನ್ನ ಹೊತ್ತು ಸಾಗಿದ ಚಂದ್ರಯಾನ-2 ಅಧಿಕ ತಾಂತ್ರಿಕ ಕ್ಲಿಷ್ಟತೆಯನ್ನ ಹೊಂದಿತ್ತು. ಜುಲೈ 22ರಂದು ಚಂದ್ರಯಾನ-2 ಉಡಾವಣೆ ಆದಾಗಿನಿಂದ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಹಲವು ನಿರೀಕ್ಷೆಗಳಿಂದ ಎದುರು ನೋಡುತ್ತಿತ್ತು.
ಇದು ಚಂದ್ರನ ಒಂದು ಪ್ರದೇಶವನ್ನು ಮಾತ್ರವಲ್ಲದೆ, ಚಂದ್ರನ ಮೇಲ್ಮೈ ಮತ್ತು ಚಂದ್ರನ ಉಪ-ಮೇಲ್ಮೈ ಸೇರಿದಂತೆ ಒಂದೇ ಮಿಷನ್‌ನಲ್ಲಿ ಎಲ್ಲವನ್ನ ಅಧ್ಯಯನ ಮಾಡುವ ಗುರಿ ಹೊಂದಿತ್ತು. ಈಗಾಗಲೇ ಆರ್ಬಿಟರ್ಅನ್ನು ಚಂದ್ರನ ಸುತ್ತ ಅದರ ಉದ್ದೇಶಿತ ಕಕ್ಷೆಯಲ್ಲಿ ಇರಿಸಲಾಗಿದೆ. ಅದರಲ್ಲಿನ ಎಂಟು ಅತ್ಯಾಧುನಿಕ ವೈಜ್ಞಾನಿಕ ಸಾಧನಗಳನ್ನು ಬಳಸಿ ಧ್ರುವ ಪ್ರದೇಶಗಳಲ್ಲಿನ ಖನಿಜಗಳು, ನೀರಿನ ಅಣುಗಳು, ಚಂದ್ರನ ವಿಕಾಸ ಮತ್ತು ನಕ್ಷೆಯ ಬಗ್ಗೆ ಅಧ್ಯಯನ ಮಾಡಲು ಸಹಕಾರಿಯಾಗಲಿದೆ.