ಹಥ್ರಾಸ್( ಉತ್ತರ ಪ್ರದೇಶ): ಹಥ್ರಾಸ್ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದಲಿತ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಐದು ಗಂಟೆಗಳ ಕಾಲ ಕೇಂದ್ರೀಯ ತನಿಖಾ ದಳ ಶನಿವಾರ ಮತ್ತೊಮ್ಮೆ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
ಶನಿವಾರ ಮಧ್ಯಾಹ್ನ ಬೂಲ್ಗರಿ ಗ್ರಾಮಕ್ಕೆ ತಲುಪಿದ ಸಿಬಿಐ ಅಧಿಕಾರಿಗಳ ತಂಡ, ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಸುಮಾರು ಐದು ಗಂಟೆಗಳ ಕಾಲ ಅಲ್ಲೇ ಉಳಿದುಕೊಂಡು ಸಂತ್ರಸ್ತೆ ಅತ್ತಿಗೆಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಘಟನೆ ನಡೆದ ದಿನ ಅಂದರೆ ಸೆಪ್ಟಂಬರ್ 14 ರಂದು ಮನೆಯಲ್ಲಿ ಯಾರೆಲ್ಲಾ ಇದ್ದರು ಎಂಬೆಲ್ಲಾ ಮಾಹಿತಿಯನ್ನು ಅಧಿಕಾರಿಗಳು, ಕುಟುಂಬದವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
"ಅಧಿಕಾರಿಗಳು ನನ್ನ ಬಳಿ ಹೆಚ್ಚೇನು ಪ್ರಶ್ನೆಗಳನ್ನು ಕೇಳಲಿಲ್ಲ. ಚೋಟು ಬಗ್ಗೆ ವಿಚಾರಿಸಿದರು, ಆದರೆ, ಆತನ ಬಗ್ಗೆ ನನಗೆ ಯಾವುದೇ ಮಾಹಿತಿ ಗೊತ್ತಿಲ್ಲ ಎಂದು ತಿಳಿಸಿದೆ, ಅಲ್ಲದೇ ಮನೆಯಿಂದ ಸಂತ್ರಸ್ತೆಯ ಬಟ್ಟೆಯನ್ನು ಅಧಿಕಾರಿಗಳು ತೆಗೆದುಕೊಂಡು ಹೋದರು. ವಿಚಾರಣೆ ವೇಳೆ ನಾವು ಯಾವುದೇ ರೀತಿಯ ಒತ್ತಡ ಎದುರಿಸಲಿಲ್ಲ" ಎಂದು ಸಂತ್ರಸ್ತೆಯ ಅತ್ತಿಗೆ ಹೇಳಿದ್ದಾರೆ.