ನವದೆಹಲಿ :ನೂತನ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ವೇಳೆ ಹೋರಾಟಗಾರರು ಕೆಂಪುಕೋಟೆ ಮೇಲೆ ಧ್ವಜ ನೆಟ್ಟಿದ್ದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರವಾಗಿ ಖಂಡಿಸಿದ್ದಾರೆ.
ನಾನು ರೈತರ ಹೋರಾಟವನ್ನು ಬೆಂಬಲಿಸುತ್ತೇನೆ. ಆದರೆ, ಹೋರಾಟಗಾರರ ಈ ಕೆಲಸ ಕ್ಷಮಿಸಲು ಅಸಾಧ್ಯ, ಇದು ಕಾನೂನು ಬಾಹಿರ ಎಂದು ಕಿಡಿಕಾರಿದ್ದಾರೆ. ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜ ಹೊರತುಪಡಿಸಿ ಮತ್ಯಾವುದೇ ಧ್ವಜ ಕೆಂಪುಕೋಟೆ ಮೇಲೆ ಹಾರಬಾರದು ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಶಿವಸೇನೆ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಕೂಡ ಈ ಘಟನೆಯನ್ನು ಖಂಡಿಸಿ, ಪ್ರಜಾಪ್ರಭುತ್ವದಲ್ಲಿ ಯಾವುದೇ ಹಿಂಸಾಚಾರ ಸ್ವೀಕಾರಾರ್ಹವಲ್ಲ. ತ್ರಿವರ್ಣ ಧ್ವಜಕ್ಕೆ ಅಗೌರವ ಸ್ವೀಕಾರಾರ್ಹವಲ್ಲ. ಪ್ರತಿಯೊಬ್ಬರೂ ಕಾನೂನನ್ನು ಪಾಲಿಸಬೇಕು. ಇಲ್ಲವಾದ್ರೆ ದೇಶ ಸೋಲುತ್ತದೆ. ಗಣರಾಜ್ಯಕ್ಕೆ ಇಂದು ದುಃಖದ ದಿನ ಎಂದಿರುವ ಅವರು, ರೈತರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಈ ದಿನಕ್ಕಾಗಿಯೇ ಕಾಯುತ್ತಿತ್ತೇ? ಕೊನೆಗೂ ಬಿಜೆಪಿ ಸರ್ಕಾರ ಲಕ್ಷಾಂತರ ರೈತರ ಮಾತಿಗೆ ಕಿವಿಗೊಡಲೇ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತ ಸಾಗುತ್ತಿದೆ. ಖಂಡಿತವಾಗಿಯೂ ಇದು ಪ್ರಜಾಪ್ರಭುತ್ವವಲ್ಲ. ದೇಶದಲ್ಲಿ ಮತ್ತಿನ್ನೇನೋ ನಡೆಯುತ್ತಿದೆ. ಜೈಹಿಂದ್ ಎಂದು ಶಿವಸೇನೆ ಸಂಸದ, ವಕ್ತಾರ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.
ಕಳೆದ ಎರಡು ತಿಂಗಳಿನಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಸಂಯಮ ಮೀರಿದ್ದರಿಂದ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಿದರು ಎಂದು ಎನ್ಸಿಪಿ ಹಿರಿಯ ನಾಯಕ ಶರದ್ ಪವಾರ್ ಹೇಳಿದರು. ಕಾನೂನು, ಸುವ್ಯವಸ್ಥೆಯನ್ನು ಕಾಪಾಡಬೇಕಾದುದು ಕೇಂದ್ರ ಸರ್ಕಾರದ ಕರ್ತವ್ಯ. ಆದರೆ, ಇಂದು ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇಂದು ನಡೆದ ಘಟನೆಯನ್ನು ಯಾರೂ ಬೆಂಬಲಿಸುವುದಿಲ್ಲ. ಆದರೆ, ಅದರ ಹಿಂದಿನ ಕಾರಣವನ್ನೂ ನಿರ್ಲಕ್ಷ್ಯಿಸಲಾಗುವುದಿಲ್ಲ. ಕೇಂದ್ರ ಸರ್ಕಾರ ಈಗಲಾದ್ರೂ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.