ಶ್ರೀನಗರ:ದೇಶದೆಲ್ಲೆಡೆ ಸ್ವಾತಂತ್ರ್ಯ ದಿನವನ್ನ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಆದರೆ, ಕಾಶ್ಮೀರಿಗರು ಮಾತ್ರ ಪ್ರಾಣಿಗಳಂತೆ ಬಂದಿಯಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಪುತ್ರಿ ಇಲ್ತಿಜ ಜಾವೇದ್ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಸಂವಿಧಾನದ 370ನೇ ವಿಧಿಯನ್ನ ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮತ್ತು ಓಮರ್ ಅಬ್ದುಲ್ಲಾ ಅವರನ್ನ ಬಂಧಿಸಲಾಗಿದ್ದು. ಅನೇಕರನ್ನ ಗೃಹಬಂಧನದಲ್ಲಿಡಲಾಗಿದೆ.
ಮೆಹಬೂಬ ಮುಫ್ತಿ ಪುತ್ರಿಯನ್ನ ಕೂಡ ಗೃಹ ಬಂಧನದಲ್ಲಿಡಲಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಇಲ್ತಿಜಾ ಇಡೀ ಭಾರತ ಸ್ವಾತಂತ್ರ್ಯ ದಿನವನ್ನ ಸಂಭ್ರಮದಿಂದ ಆಚರಿಸುತ್ತಿದೆ. ಆದರೆ ಕಾಶ್ಮೀರಿಗರು ಮಾತ್ರ ಪ್ರಾಣಿಗಳಂತೆ ಬಂಧಿಯಾಗಿದ್ದಾರೆ. ನಮ್ಮ ಮೂಲಭೂತ ಹಕ್ಕು ಕಸಿದುಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭದ್ರತಾ ಅಧಿಕಾರಿಗಳು ಮಾಧ್ಯಮದವರ ಜೊತೆ ಮಾತನಾಡಲೂ ಬಿಡುತ್ತಿಲ್ಲ. ಒಂದು ವೇಳೆ ಮಾತನಾಡಿದ್ರೆ ಸಾಯಿಸುವ ಬೆದರಿಕೆ ಹಾಕುತಿದ್ದಾರೆ ಎಂದು ಆರೋಪಿಸಿ ಅಮಿತ್ ಶಾ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಅಲ್ಲದೇ ಒಂದು ಧ್ವನಿ ಸಂದೇಶವನ್ನೂ ಕಳಿಸಿರುವ ಇಲ್ತಿಜ ಜಾವೇದ್, ನನ್ನನ್ನು ಅಪರಾಧಿಯಂತೆ ಪರಿಗಣಿಸಲಾಗುತ್ತಿದೆ. ನಾನು ನಿರಂತರವಾಗಿ ಕಣ್ಗಾವಲಿನಲ್ಲಿದ್ದೇನೆ. ನನ್ನನ್ನು ಸೇರಿದಂತೆ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಕಾಶ್ಮೀರದ ಜನರಿಗೆ ಜೀವ ಭಯ ಕಾಡುತ್ತಿದೆ ಎಂದಿದ್ದಾರೆ.