ಇದೇ ನವೆಂಬರ್ 14ರಂದು 11ನೇ ಬ್ರಿಕ್ಸ್ ಶೃಂಗಸಭೆ ಬ್ರೆಜಿಲ್ನ ಬ್ರೆಸಿಲಿಯಾದಲ್ಲಿ ಸಮಾರೋಪಗೊಂಡಿತು. ಐದು ಸದಸ್ಯ ರಾಷ್ಟ್ರಗಳ ಈ ಮಹತ್ವದ ಸಭೆಯಲ್ಲಿ ಭಾರತ, ಬ್ರೆಜಿಲ್, ಚೀನಾ, ರಷ್ಯಾ ಹಾಗೂ ದಕ್ಷಿಣ ಆಫ್ರಿಕಾ ಭಾಗವಹಿಸಿದವು.
ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಾಲ್ಕು ಅರ್ಥವ್ಯವಸ್ಥೆಗಳನ್ನು ಗುರುತಿಸುವ ಸಲುವಾಗಿ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಪ್ರತಿನಿಧಿಸುವ BRIC ಎಂಬ ಪದವನ್ನು 2001ರಲ್ಲಿ ಮೊದಲ ಬಾರಿಗೆ ಹೂಡಿಕೆ ನಿರ್ವಹಣಾ ಸಂಸ್ಥೆಯಾದ ಗೋಲ್ಡ್ಮನ್ ಸ್ಯಾಚ್ಸ್ ಅಸೆಟ್ಸ್ ಮ್ಯಾನೇಜ್ಮೆಂಟ್ ಸಮೂಹದ ಅಂದಿನ ಅಧ್ಯಕ್ಷ ಜಿಮ್ ಓ ನೀಲ್ ಅವರು ಬಳಸಿದರು. 2050ರ ಹೊತ್ತಿಗೆ ವಿಶ್ವದ ಅಗ್ರ ಐದು ಅರ್ಥವ್ಯವಸ್ಥೆಗಳಲ್ಲಿ ಈ ನಾಲ್ಕು ದೇಶಗಳ ಅರ್ಥವ್ಯವಸ್ಥೆ ಕೂಡ ಸೇರಿರುತ್ತದೆ ಎಂದು ಎಂದು ಓ'ನೀಲ್ ಭವಿಷ್ಯ ನುಡಿದಿದ್ದಾರೆ. ಅವುಗಳಲ್ಲಿ ಚೀನಾ ಮತ್ತು ಭಾರತ ಮೊದಲ ಎರಡು ಸ್ಥಾನಗಳನ್ನು ಪಡೆದಿರುತ್ತವೆ ಎಂಬುದು ಅವರ ಗ್ರಹಿಕೆ. ನಾಲ್ಕು ದೇಶಗಳಲ್ಲಿರುವ ಈಗಿನ ಸದೃಢ ಆರ್ಥಿಕ ಬೆಳವಣಿಗೆಗಳನ್ನು ಆಧರಿಸಿ ಈ ಭವಿಷ್ಯ ನುಡಿಯಲಾಗಿತ್ತು. ತಮ್ಮ ಸ್ಥಿರ ಹಣಕಾಸಿನ ಬೆಳವಣಿಗೆಯಿಂದ ಉತ್ತೇಜಿತಗೊಂಡ ನಾಲ್ಕು ರಾಷ್ಟ್ರಗಳು ಈ ಗುಂಪುಗಾರಿಕೆಯನ್ನು ಅಧಿಕೃತಗೊಳಿಸಿದವು ಮತ್ತು ಬ್ರಿಕ್‌ನ ಮೊದಲ ಶೃಂಗಸಭೆ ಸಭೆ ಜೂನ್, 2009ರಲ್ಲಿ ರಷ್ಯಾದಲ್ಲಿ ನಡೆಯಿತು. ನಂತರ, ದಕ್ಷಿಣ ಆಫ್ರಿಕಾ ಗಣರಾಜ್ಯವನ್ನು ಬ್ರಿಕ್ಸ್ ಗುಂಪಿಗೆ ಸೇರಿಸಲಾಯಿತು. ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಪಾಕಿಸ್ತಾನದಂತಹ ಇನ್ನೂ ಅನೇಕ ದೇಶಗಳು ಅಂದಿನಿಂದ ಈ ಹೊಸ ಗುಂಪಿಗೆ ಸೇರುವ ಇಚ್ಛೆ ವ್ಯಕ್ತಪಡಿಸಿವೆ. ಬ್ರಿಕ್ಸ್ ರಾಷ್ಟ್ರಗಳು, ಶೇ 27ಕ್ಕಿಂತ ಹೆಚ್ಚು ವಿಶ್ವ ಭೂ ದ್ರವ್ಯರಾಶಿಯನ್ನು, ಶೇ 41ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು, 18.6 ಟ್ರಿಲಿಯನ್ ಡಾಲರಿನಷ್ಟು (ವಿಶ್ವದ ಶೇ 23.2) ಕನಿಷ್ಟ ಮೊತ್ತದ ಜಿಡಿಪಿಯನ್ನು, 40.55 ಟ್ರಿಲಿಯನ್ ಡಾಲರ್ ಮೊತ್ತದ ಖರೀದಿ ಸಾಮರ್ಥ್ಯದ ಹೋಲಿಕೆ (ಪಿಪಿಪಿ) ಇರುವ ಜಿಡಿಪಿಯನ್ನು ಹಾಗೂ 4.46 ಟ್ರಿಲಿಯನ್ ಡಾಲರಿನಷ್ಟು ವಿದೇಶಿ ವಿನಿಮಯ ಸಂಗ್ರಹವನ್ನು ಪ್ರತಿನಿಧಿಸುತ್ತದೆ. ಇದಕ್ಕಾಗಿ ಚೀನಾಕ್ಕೆ ಮುಖ್ಯವಾಗಿ ಕೃತಜ್ಞತೆ ಸಲ್ಲಿಸಬೇಕಿದೆ. ಈ ಅಗಾಧ ಅಂಕಿ ಅಂಶಗಳು ಖಂಡಿತವಾಗಿಯೂ ಬ್ರಿಕ್ಸ್ ರಾಷ್ಟ್ರಗಳನ್ನು ಉಳಿದ ದೇಶಗಳು ಗಂಭೀರವಾಗಿ ಪರಿಗಣಿಸುವಂತೆ ಮಾಡಿವೆ.
‘ಹಣಕಾಸು ಸಂಸ್ಥೆಗಳ ಸುಧಾರಣೆ ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಯ ಅಭಿವೃದ್ಧಿ’ ಎಂಬ ಮೂಲ ಗುರಿಯೊಂದಿಗೆ ಪಶ್ಚಿಮ ದೇಶಗಳಿಂದ ಪ್ರೇರಿತವಾದ ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಅಸಮ ಕಾರ್ಯಸೂಚಿಯ ಬಗ್ಗೆ ಕಳವಳ ವ್ಯಕ್ತಪಡಿಸಲು ಪ್ರಾರಂಭಿಸಿತು. ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲ ಪಡೆಯುವ ಸಾಂಪ್ರದಾಯಿಕ ನಿಲುವಿಗೆ ವ್ಯತಿರಿಕ್ತವಾಗಿ ಬ್ರಿಕ್ಸ್ 2012ರಲ್ಲಿ ಐಎಂಎಫ್ ನ ಸಾಲದ ಶಕ್ತಿ ವೃದ್ಧಿಗೆ 75 ಬಿಲಿಯನ್ ಡಾಲರ್ ಭರವಸೆ ನೀಡಿದೆ.
ನಿಧಾನಗತಿಯ ಬಗ್ಗೆ ವ್ಯಕ್ತವಾಗುತ್ತಿರುವ ಟೀಕೆಗಳ ಮಧ್ಯೆ, ಬ್ರಿಕ್ಸ್ 2014 ರಲ್ಲಿ ತನ್ನ ಪ್ರತಿಯೊಂದು ಸದಸ್ಯ ದೇಶದಿಂದ 10 ಬಿಲಿಯನ್ ಡಾಲರ್ ಆರಂಭಿಕ ಮೊತ್ತದ (ನಂತರ ಅದನ್ನು ದ್ವಿಗುಣಗೊಳಿಸಲು) ಮೂಲನಿಧಿ ಸಂಗ್ರಹಿಸಿ ತನ್ನದೇ ಆದ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಸ್ಥಾಪಿಸಲು ನಿರ್ಧರಿಸಿತು. ಬ್ಯಾಂಕ್, ವಿವಿಧ ದೇಶಗಳ ಅಭಿವೃದ್ಧಿ ಯೋಜನೆಗಳಿಗೆ ಸಾಲ ಒದಗಿಸುತ್ತದೆ. ಆಕಸ್ಮಿಕ ನಿಧಿ ವ್ಯವಸ್ಥೆ ಸ್ಥಾಪಿಸುವ ಒಪ್ಪಂದಕ್ಕೆ ಕೂಡ ಬ್ರಿಕ್ಸ್ 2014 ರಲ್ಲಿ ಸಹಿ ಹಾಕಿತು. ಅನಿರೀಕ್ಷಿತ ಸಂದರ್ಭಗಳು ಎದುರಾದಾಗ ತನ್ನ ಸದಸ್ಯ ರಾಷ್ಟ್ರಗಳಿಗೆ ಸಾಲ ನೀಡುವ ಗುರಿ ಇದರದು. ಇದರಡಿ 100 ಬಿಲಿಯನ್ ಡಾಲರ್ ಸಂಚಿತ ಬಂಡವಾಳ ಸಂಗ್ರಹವಾಗಿದ್ದು ಬಿಕ್ಕಟ್ಟಿನ ಸಂದರ್ಭದಲ್ಲಿಬ್ರಿಕ್ಸ್ ಪಾಲಿಗೆ ಆರ್ಥಿಕ ಸ್ಥಿರತೆಯ ಖಾತರಿನಿಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ‘ಸ್ವಿಫ್ಟ್’ (SWIFT- ಸೊಸೈಟಿ ಫಾರ್ ವರ್ಲ್ಡ್‌ವೈಡ್ ಇಂಟರ್‌ಬ್ಯಾಂಕ್ ಫೈನಾನ್ಷಿಯಲ್ ಟೆಲಿಕಮ್ಯುನಿಕೇಶನ್) ದೇಶಗಳಿಗೆ ಸವಾಲೊಡ್ಡಿ ಪ್ರತ್ಯೇಕ ನಿಧಿ ವರ್ಗಾವಣೆ ವ್ಯವಸ್ಥೆಯಂತಹ ಅಮೆರಿಕ ನಿರ್ಬಂಧಗಳನ್ನು ತಪ್ಪಿಸಲು ಸಂವಹನ, ಮಾಹಿತಿ ತಂತ್ರಜ್ಞಾನ, ಸುಂಕ ಮತ್ತು ತೆರಿಗೆ, ಹವಾಮಾನ ಬದಲಾವಣೆ, ಮಾಲಿನ್ಯ ನಿಯಂತ್ರಣ, ಭಯೋತ್ಪಾದನೆ ನಿಗ್ರಹ, ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಾವೀನ್ಯತೆ, ಇಂಧನ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸದಸ್ಯ ರಾಷ್ಟ್ರಗಳು ವಿವಿಧ ರೀತಿಯಲ್ಲಿ ತಿಳಿವಳಿಕೆ / ಒಡಂಬಡಿಕೆಗೆ ಮುಂದಾಗಲು ಯತ್ನಿಸುತ್ತಿವೆ.
ಆದರೆ ಇತರ ಬಹುಪಕ್ಷೀಯ ಸಂಘಟನೆಗಳಂತೆ, ಬ್ರಿಕ್ಸ್ ಕೂಡ ಟೀಕೆಗಳನ್ನು ಎದುರಿಸುತ್ತಿದೆ. ಕೆಲವು ವಿಮರ್ಶಕರು ಇದನ್ನು ಚೀನಾ ಕೇಂದ್ರಿತ ಎಂದು ಬ್ರಾಂಡ್ ಮಾಡಿದರೆ, ಇನ್ನೂ ಕೆಲವರು ವಿಭಿನ್ನ ಮತ್ತು ಸ್ಪರ್ಧಾತ್ಮಕ ಆಸಕ್ತಿಗಳ ಗುಂಪು ಎಂದು ಜರಿಯುತ್ತಾರೆ. ಆದರೆ ಸದಾ ಒಂದೇ ರೀತಿಯ ಅಥವಾ ಸಮಾನ ಬಗೆಯ ಗುರಿಗಳನ್ನು ಹೊಂದಿರದ ಸದಸ್ಯ ರಾಷ್ಟ್ರಗಳಲ್ಲಿ ಇಂತಹ ಘರ್ಷಣೆ ಸ್ವಾಭಾವಿಕ ಎಂಬುದನ್ನು ನಾವು ಮರೆಯುವಂತಿಲ್ಲ. ಉತ್ತಮ ರಾಜತಾಂತ್ರಿಕ ಕಾರ್ಯಗಳ ಮೂಲಕ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಿದೆ.
ಬ್ರಿಕ್ಸ್ ನಮಗೆ ಏಕೆ ಮುಖ್ಯ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಬ್ರಿಕ್ಸ್ ಶೃಂಗಸಭೆಯಿಂದ ನಮಗೆ ಏನು ಸಿಕ್ಕಿದೆ ಎಂಬುದು ಸಾಮಾನ್ಯವಾಗಿ ಎದುರಾಗುವ ಪ್ರಶ್ನೆ. ಸಾರ್ಕ್, ಜಿ- 20ಯಂತಹ ದೊಡ್ಡ ಗುಂಪುಗಳಿಗೆ ಹೋಲಿಸಿದರೆ ಈ ಪ್ರಾದೇಶಿಕ ಸಣ್ಣ ಗುಂಪು ಕಾರ್ಯ ನಿರ್ವಹಿಸುವುದು ಮತ್ತು ಚರ್ಚೆ ನಡೆಸುವುದು ಸುಲಭ. ಎರಡನೆಯದಾಗಿ ಸಾರ್ಕ್ ಬಹುತೇಕ ಸಾವನ್ನಪ್ಪಿದ್ದು ಜಿ- 20 ರಾಷ್ಟ್ರಗಳು ಪುಟ್ಟ ವಿಶ್ವಸಂಸ್ಥೆಯ ಮಟ್ಟಕ್ಕೆ ಇಳಿದಿವೆ. ನಿರ್ದಿಷ್ಟ ಉದ್ದೇಶಗಳ ಈಡೇರಿಕಾಗಾಗಿ ಬ್ರಿಕ್ಸ್, ಬಿಮ್‌ಸ್ಟೆಕ್ ಹಾಗೂ ಆಸಿಯಾನ್ ರೀತಿಯ ರಾಷ್ಟ್ರಗಳು ಹೆಚ್ಚು ಪ್ರಸ್ತುತವಾಗುತ್ತಿವೆ. ಭಯೋತ್ಪಾದನೆ ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆರವು, ಮನಿ ಲಾಂಡರಿಂಗ್ ರೀತಿಯ ಸಮಸ್ಯೆಗಳನ್ನು ಎದುರಿಸಲು ಜಂಟಿ ಪ್ರಯತ್ನ ನಡೆಸುವ ಕುರಿತ ಭಾರತದ ನಿಲುವನ್ನು ಬ್ರೆಸಿಲಿಯಾದಲ್ಲಿ ಇತ್ತೀಚೆಗೆ ಸಮಾರೋಪಗೊಂಡ ಶೃಂಗಸಭೆ ಕೂಡ ಸಮರ್ಥಿಸಿದೆ.