ನೊಯ್ಡಾ(ಯುಪಿ):ಹಲವು ದಿನಗಳಿಂದ ನಾಪತ್ತೆಯಾಗಿದ್ದ ಯುವತಿಯೊಬ್ಬಳು 2 ಬೃಹತ್ ಕಟ್ಟಡಗಳ ನಡುವಿನ ಸಣ್ಣ ಅಂತರದಲ್ಲಿ ಸಿಲುಕಿ, ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ನಡೆದಿದೆ.
ನೊಯ್ಡಾದ ಆಮ್ರಪಾಲಿ ಸಿಲಿಕಾನ್ ಸೊಸೈಟಿಯ ಎರಡು ಬೃಹತ್ ಕಟ್ಟಡಗಳ ನಡುವಿನ 1.5 ಪಾದದಳತೆ ಅಂತರದಲ್ಲಿ ಯುವತಿ ಶವ ಪತ್ತೆಯಾಗಿದೆ. 120 ಅಡಿ ಎತ್ತರದಲ್ಲಿ, ಅಷ್ಟು ಚಿಕ್ಕ ಅಂತರದಲ್ಲಿ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲು ಪೊಲೀಸರು ಹಾಗೂ ಎನ್ಡಿಆರ್ಎಫ್ ಹರಸಾಹಸ ಪಡಬೇಕಾಯ್ತು.
ಮೃತ ಯುವತಿ ಬಿಹಾರದ ಕತಿಹಾರ್ ಮೂಲದದವಳು. ಇದೇ ಕಟ್ಟಡದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಜೂನ್ 28ರಂದು ಈಕೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಬೇರೆಡೆ ಹೋಗಿದ್ದ ಮನೆಯ ಮಾಲೀಕ ಹಾಗೂ ಆತನ ಪತ್ನಿ ಇಂದು ಬೆಳಗ್ಗೆ ಮನೆಗೆ ಬಂದಿದ್ದರು. ದುರ್ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಕಟ್ಟಡಗಳ ನಡುವೆ ಗಮನಿಸಿದಾಗ ಯಾರೋ ಸಿಲುಕಿರುವುದು ಪತ್ತೆಯಾಗಿದೆ. ಪೊಲೀಸರಿಗೆ ಮಾಹಿತಿ ನೀಡಿ, ಶವ ಕೆಳಗಿಳಿಸಿದಾಗ ಮಾಲೀಕರು, ಯುವತಿಯ ಗುರುತು ಪತ್ತೆ ಮಾಡಿದ್ದಾರೆ.