ನವದೆಹಲಿ:ಲೋಕಸಭೆ ಚುನಾವಣೆ ಕಣದಿಂದ ಪಕ್ಷದ ಪ್ರಮುಖ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ದೂರವಿಟ್ಟ ಬಿಜೆಪಿ, ಇದೀಗ ಪ್ರಚಾರದಿಂದಲೂ ಅವರನ್ನು ಹೊರಗಿಟ್ಟಿತೇ? ಎಂಬ ಮಾತುಗಳು ವ್ಯಾಪಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.
ಎಲ್ಲಾ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿರುವ ಉತ್ತರಪ್ರದೇಶದ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಪಕ್ಷದ ಎಲ್ಲಾ ನಾಯಕರನ್ನೂ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಅಡ್ವಾಣಿ ಹಾಗೂ ಮತ್ತೋರ್ವ ಪ್ರಮುಖ ನಾಯಕ ಮುರುಳಿ ಮನೋಹರ್ ಜೋಶಿ ಅವರ ಹೆಸರುಗಳಿಲ್ಲ.
ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಉಮಾ ಭಾರತಿ, ನಿರ್ಮಲಾ ಸೀತಾರಾಮನ್ ಹಾಗೂ ಯೋಗಿ ಆದಿತ್ಯನಾಥ ಸೇರಿ ಎಲ್ಲ ಪ್ರಮುಖ ನಾಯಕರ ಹೆಸರಿದೆ. ಆದರೆ ಹಿರಿಯ ನಾಯಕರಾದ ಅಡ್ವಾಣಿ ಹಾಗೂ ಜೋಶಿ ಹೆಸರಿಲ್ಲದಿರುವುದು ಚರ್ಚೆಗೀಡಾಗಿದೆ.
80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದ ಚುನಾವಣಾ ಕಣ ರಂಗು ಪಡೆದಿದೆ. ಸಾಕಷ್ಟು ಮಹತ್ವದ ಕ್ಷೇತ್ರ ಎನಿಸಿಕೊಂಡಿರುವ ಇಲ್ಲಿಯೇ ಪ್ರಮುಖ ಇಬ್ಬರು ನಾಯಕರನ್ನು ಹೊರಗಿಡಲಾಯಿತೇ? ಎಂಬುದು ಹಲವರ ಪ್ರಶ್ನೆ.