2020ರ ಜೂನ್ 28, ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಜನ್ಮ ಶತಮಾನೋತ್ಸವದ ದಿನ. ರಾಷ್ಟ್ರ ನಿರ್ಮಾಣ, ಸಾರ್ವಜನಿಕ ನೀತಿ ಹಾಗೂ ಆಡಳಿತದ ಬಗ್ಗೆ ಒಳನೋಟ ಮತ್ತು ವಿದ್ವತ್ತು ಇದ್ದ ಕಾರಣಕ್ಕಾಗಿ ಅವರನ್ನು ಆಧುನಿಕ ಚಾಣಕ್ಯ ಎನ್ನಲಾಗುತ್ತದೆ. ಅಲ್ಪಬಲದ ಸರ್ಕಾರವನ್ನು 5 ವರ್ಷಗಳ ಪೂರ್ಣ ಅವಧಿಯವರೆಗೆ ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಜನ ಸಾಮಾನ್ಯರ ಕಣ್ಣಲ್ಲಿ ಕೂಡ ಅವರು ಆಧುನಿಕ ಚಾಣಕ್ಯ. ಅವರೊಬ್ಬ ಸುಧಾರಕ, ಶಿಕ್ಷಣ ತಜ್ಞ, ಭಾಷಾಶಾಸ್ತ್ರಜ್ಞ ಹಾಗೂ ಪ್ರಬುದ್ಧ ವಿದ್ವಾಂಸರಾಗಿದ್ದರು.
ರಾವ್ ತಮ್ಮ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಡಾ.ಮನಮೋಹನ್ ಸಿಂಗ್ ಜೊತೆಗೂಡಿ ಭಾರತೀಯ ಆರ್ಥಿಕತೆಯನ್ನು ಲೈಸೆನ್ಸ್ ರಾಜ್ ಕಪಿಮುಷ್ಠಿಯಿಂದ ಬಿಡಿಸಿದರು. ಉದಾರಿಕರಣದತ್ತ ಕೊಂಡೊಯ್ದರು. ಆ ಮೂಲಕ ಜಾಗತಿಕ ಸ್ಪರ್ಧೆಗೆ ದೇಶ ತೆರೆದುಕೊಳ್ಳುವಂತೆ ಮಾಡಿದರು. ಈ ಕುರಿತು ಸಾರ್ವಜನಿಕ ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆದಿದ್ದು, ನಾನದನ್ನು ಪುನರಾವರ್ತಿಸುವುದಿಲ್ಲ. ಜಾಗತಿಕ ಆರ್ಥಿಕತೆಯಲ್ಲಿ ಮಂದಗತಿಯ ಪ್ರಗತಿಯಿಂದ ಗುರುತಿಸಿಕೊಂಡಿತ್ತು ‘ಹಿಂದೂ ಬೆಳವಣಿಗೆಯ ದರ’. ಭಾರತ ಐದು ದಶಕಗಳಿಂದಲೂ ಆ ಮುಗ್ಗಟ್ಟಿನಲ್ಲಿ ನಲುಗುತ್ತಿದ್ದಾಗ ರಾವ್ ಪರಿಹಾರ ರೂಪವಾಗಿ ಬಂದಿದ್ದರು.
ನಾನು ಜೂನ್ 1994ರಿಂದ ಅಕ್ಟೋಬರ್ 1997ರವರೆಗೆ ಕೇಂದ್ರ ಗೃಹ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಅವರೆಂದೂ ಅನುಕೂಲ ಸಿಂಧು ರಾಜಕಾರಣಕ್ಕೆ ಮುಂದಾದವರಲ್ಲ ಎಂಬುದಕ್ಕೆ ಉದಾಹರಣೆ ವಿರೋಧ ಪಕ್ಷದ ನಾಯಕ ಸುಬ್ರಮಣ್ಯಂ ಸ್ವಾಮಿ ಅವರಿಗೆ ಕ್ಯಾಬಿನೆಟ್ ಶ್ರೇಣಿಯ ಸ್ಥಾನಮಾನ ನೀಡಿದ್ದು. ಮತ್ತೊಬ್ಬ ವಿರೋಧ ಪಕ್ಷದ ನಾಯಕ ಮತ್ತು ಬಹುದೊಡ್ಡ ವಾಗ್ಮಿ ಎನಿಸಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರನ್ನು ವಿಶ್ವಸಂಸ್ಥೆ ಸಭೆಗೆ ಭಾರತದ ಪ್ರತಿನಿಧಿಯಾಗಿ ಕಳುಹಿಸಿದ್ದು. ಅರ್ಥಶಾಸ್ತ್ರಜ್ಞ ಮತ್ತು ರಾಜಕೀಯೇತರ ವ್ಯಕ್ತಿಯಾಗಿದ್ದ ಡಾ.ಮನಮೋಹನ್ ಸಿಂಗ್ ಅವರನ್ನು ಭಾರತದ ಹಣಕಾಸು ಮಂತ್ರಿಯಾಗಿ ನೇಮಿಸಿದ್ದು ಮರೆಯಲಾಗದ ಸಂಗತಿ.
ರಾವ್ ಅವರಲ್ಲಿ ನಾನು ಗಮನಿಸಿದ ಸಂಗತಿ ಎಂದರೆ ತಮ್ಮ ರಾಜಕೀಯ ವಿರೋಧಿಗಳು (ಹೆಚ್ಚಾಗಿ ತಮ್ಮದೇ ಪಕ್ಷದ ಕಾಂಗ್ರೆಸ್ನಿಂದ) ಸೃಷ್ಟಿಸಿದ ಅನೇಕ ಬಿಕ್ಕಟ್ಟುಗಳ ನಡುವೆಯೂ ಅವರು ತಣ್ಣಗೆ, ಶಾಂತವಾಗಿ ಇರುತ್ತಿದ್ದರು. ಎಂದಿಗೂ ತೊಂದರೆಗೀಡಾದವರಂತೆ ಕಾಣುತ್ತಿರಲಿಲ್ಲ. ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಘಟನೆಗಳ ನಿಭಾಯಿಸುವಿಕೆಗೆ ಸಂಬಂಧಿಸಿದಂತೆ ಟೀಕೆಗಳು ಎದುರಾದಾಗಲೂ ಆಡಳಿತಾತ್ಮಕ ಮತ್ತು ರಾಜಕೀಯ ಸಮಸ್ಯೆಗಳನ್ನು ಅವರು ಸಮಚಿತ್ತದಿಂದ ಎದುರಿಸಿದ್ದರು. ಬಾಬರಿ ಮಸೀದಿ ವಿಷಯವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ ಲಿಬ್ರಹನ್ ಆಯೋಗ, ಪ್ರಧಾನಮಂತ್ರಿ ತೆಗೆದುಕೊಂಡ ನಿಲುವಿಗಾಗಿ ಅವರನ್ನು ದೂಷಿಸಲಾಗದು ಎಂದು ಅಭಿಪ್ರಾಯಪಟ್ಟಿತು. ‘ಸ್ಥಿತಪ್ರಜ್ಞ’ ಎಂಬುದಕ್ಕೆ ಅವರೊಂದು ವಿಶಿಷ್ಟ ಉದಾಹರಣೆ. ಅವರ ಆಡಳಿತದ ಅತ್ಯಂತ ವಿಶಿಷ್ಟ ವೈಖರಿ ಎಂದರೆ ಭಾರತದ ಸಂವಿಧಾನಕ್ಕೆ ಅವರ ಸಂಪೂರ್ಣ ಸಮರ್ಪಣೆ. ಪ್ರಧಾನಿ ಅಂಕಿತ ಪಡೆಯಲು ಯಾವುದೇ ಹೊಸ ನೀತಿಯ ಕಡತ ಅವರ ಎದುರು ಹೋದಾಗ ಅವರು ಕೇಳುತ್ತಿದ್ದ ಮೊದಲ ಪ್ರಶ್ನೆ: “ಇದು ಸಾಂವಿಧಾನಿಕವೇ?". ಎಂಬುದಾಗಿತ್ತು.
ಭಾರತದ “ಲುಕ್ ಈಸ್ಟ್ ನೀತಿ” ಯನ್ನು ವಿಕಸಿಸಿದ ಮೊದಲ ನಾಯಕ ಇವರು. ಅಲ್ಲಿಯವರೆಗೆ ಪಾಶ್ಚಾತ್ಯ ರಾಷ್ಟ್ರಗಳ ಕಡೆಗೆ ಅಥವಾ ಕೊಲ್ಲಿ ದೇಶಗಳತ್ತ ಮಾತ್ರ ಗಮನ ಹರಿಸಲಾಗುತ್ತಿತ್ತು. ಬಾಂಗ್ಲಾದೇಶ, ಮಯನ್ಮಾರ್, ಥಾಯ್ಲೆಂಡ್ ಮತ್ತಿತರ ಆಸಿಯಾನ್ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುವುದರಿಂದ ಮಾತ್ರ ಏಷ್ಯಾದಲ್ಲಿ ಭಾರತದ ಸ್ಥಾನ ಗಟ್ಟಿಯಾಗಬಹುದು ಎಂದು ಅವರು ಭಾವಿಸಿದ್ದರು. 1992ರ ಹೊತ್ತಿಗೆ ಇಸ್ರೇಲ್ ಜೊತೆ ಬಲವಾದ ಸಂಬಂಧ ಬೆಳೆಸಿ ಅದು ನವದೆಹಲಿಯಲ್ಲಿ ತನ್ನ ರಾಯಭಾರ ಕಚೇರಿ ತೆರೆಯುವಂತೆ ಮಾಡಿಕೊಟ್ಟದ್ದು ಇದೇ ನರಸಿಂಹರಾವ್. ಇರಾನ್‌ನೊಂದಿಗೆ ಕೂಡ ಬಲವಾದ ಬಾಂಧವ್ಯ ಬೆಸೆದರು. ದೇಶದ ಪರಮಾಣು ಪರೀಕ್ಷೆಗಳನ್ನು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮವನ್ನು ಪಿವಿಎನ್ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದರು. ವಾಸ್ತವವಾಗಿ, 1996ರ ಮೇನಲ್ಲಿ, ಸಾರ್ವತ್ರಿಕ ಚುನಾವಣೆಗೆ ಕೆಲ ದಿನಗಳ ಮೊದಲು, ಡಾ. ಅಬ್ದುಲ್ ಕಲಾಂ ಅವರಿಗೆ ಪರಮಾಣು ಬಾಂಬ್ ಪರೀಕ್ಷೆಗೆ ಸಿದ್ಧರಾಗುವಂತೆ ಆದೇಶ ನೀಡಿದ್ದರು. ಹಾಗಿದ್ದರೂ ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ವಿರುದ್ಧ ಹೊರಹೊಮ್ಮಿದವು. ಅಂತಿಮವಾಗಿ 1998 ರಲ್ಲಿ ವಾಜಪೇಯಿ ಸರ್ಕಾರ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ ನಡೆಸಿತು.