ಪಾಟ್ನಾ (ಬಿಹಾರ): ಬಿಹಾರ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ ಕೊರೊನಾ ಲಸಿಕೆಯನ್ನು ಬಿಹಾರದ ಜನತೆಗೆ ಉಚಿತವಾಗಿ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಕೊರೊನಾ ವಿರುದ್ಧ ಹೋರಾಡುತ್ತಿದೆ. ಕೊರೊನಾ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಂಗೀಕರಿಸಿದ ಕೂಡಲೇ ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದನ್ನು ಬಹಿರಂಗಪಡಿಸಿದ್ದಾರೆ.
ಬಿಹಾರವು ರಾಜಕೀಯ ಸೂಕ್ಷ್ಮತೆಯನ್ನು ಹೊಂದಿರುವ ರಾಜ್ಯವಾಗಿದ್ದು, ಇಲ್ಲಿನ ಜನರು ಪಕ್ಷ ನೀಡಿದ ಭರವಸೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಯಾರಾದರೂ ನಮ್ಮ ಪ್ರಣಾಳಿಕೆಯ ಬಗ್ಗೆ ಪ್ರಶ್ನೆ ಮಾಡಿದರೆ ನಾವು ಉತ್ತರಿಸಲು ಸಿದ್ಧ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರದಲ್ಲಿ ಎನ್ಡಿಎ ಸರ್ಕಾರವಿದ್ದಾಗ ಬಿಹಾರದ ಜಿಡಿಪಿ ಹೆಚ್ಚಾಗಿದೆ. ಶೇಕಡಾ 3ರಿಂದ 11.3ರವರೆಗೆ ಬಿಹಾರ ರಾಜ್ಯದ ಜಿಡಿಪಿ ಏರಿಕೆ ಕಂಡಿದೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದು, ಜಂಗಲ್ ರಾಜ್ ಅವಧಿಯಲ್ಲಿ ಜಿಡಿಪಿ ಏರಿಕೆ ಕಂಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ನಮ್ಮ ಸರ್ಕಾರವು ಜನರಿಗೆ ಉತ್ತಮ ಆಡಳಿತ ನೀಡಲು ಆದ್ಯತೆ ನೀಡಿದ್ದರಿಂದ ಇದು ಸಾಧ್ಯವಾಗಿದೆ. ಲಾಲೂ ಪ್ರಸಾದ್ ಯಾದವ್ ಅವರು 15 ವರ್ಷದ ಅವಧಿಯಲ್ಲಿ ಶೇಕಡಾ 34ರಷ್ಟು ಮಂದಿಗೆ ಮನೆ ನಿರ್ಮಿಸಿಕೊಟ್ಟರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಶೇಕಡಾ 96ರಷ್ಟು ಮಂದಿಗೆ ಮನೆ ನಿರ್ಮಾಣ ಮಾಡಿಕೊಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.
ಎನ್‌ಡಿಎಗೆ ಮತ ಚಲಾಯಿಸಿ ಗೆಲ್ಲಿಸುವಂತೆ ರಾಜ್ಯದ ಎಲ್ಲಾ ಮತದಾರರಿಗೆ ಮನವಿ ಮಾಡಿದ ಸೀತಾರಾಮನ್, "ನಿತೀಶ್ ಕುಮಾರ್ ಮುಂದಿನ 5 ವರ್ಷಗಳ ಕಾಲ ಬಿಹಾರದ ಮುಖ್ಯಮಂತ್ರಿಯಾಗಲಿದ್ದಾರೆ. ಅವರ ಆಡಳಿತದಲ್ಲಿ ಬಿಹಾರ ಪ್ರಗತಿಪರ ಮತ್ತು ಅಭಿವೃದ್ಧಿ ಹೊಂದಿದ ರಾಜ್ಯವಾಗಲಿದೆ'' ಎಂದು ಭರವಸೆ ನೀಡಿದರು.
ಪ್ರಣಾಳಿಕೆ ಬಿಡುಗಡೆ ವೇಳೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹಾಗೂ ಬಿಜೆಪಿ ನಾಯಕರಾದ ಭೂಪೇಂದರ್ ಯಾದವ್, ನಿತ್ಯಾನಂದ್ ರೈ, ಅಶ್ವಿನಿ ಚೌಬೆ ಮತ್ತು ಪ್ರಮೋದ್ ಕುಮಾರ್ ಇದ್ದರು.