ಪಾಟ್ನಾ (ಬಿಹಾರ):ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ಮತದಾರರನ್ನು ತಮ್ಮತ್ತ ಸೆಳೆಯಲು ರಾಜಕೀಯ ಪಕ್ಷಗಳು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡುತ್ತಿವೆ. ಇಂದು ಎಲ್ಜೆಪಿ ಹಾಗೂ ಕಾಂಗ್ರೆಸ್ ಮ್ಯಾನಿಫೆಸ್ಟೋ ಬಿಡುಗಡೆ ಮಾಡಿವೆ.
ಪಾಟ್ನಾದಲ್ಲಿ ಎಲ್ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ರಾಜ್ಯದ 4 ಲಕ್ಷ ಜನರ ಜತೆ ಸಮಾಲೋಚಿಸಿ ಈ ಮ್ಯಾನಿಫೆಸ್ಟೋ ತಯಾರಿಸಲಾಗಿದೆ. ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳು ಈ ಪ್ರಣಾಳಿಕೆಯಲ್ಲಿವೆ. ‘ಬಿಹಾರ್ ಫಸ್ಟ್ ಬಿಹಾರಿ ಫಸ್ಟ್’ ಯೋಜನೆ ಮೂಲಕ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಚಿರಾಗ್ ಪಾಸ್ವಾನ್ ಹೇಳಿದರು.
ಕಾಂಗ್ರೆಸ್ನಿಂದ ಪ್ರಣಾಳಿಕೆ ಬಿಡುಗಡೆ:
ಜೆಡಿಯು, ಬಿಜೆಪಿ, ಎಲ್ಜೆಪಿಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಮ್ಯಾನಿಫೆಸ್ಟೋ ಬಿಡುಗಡೆ ಮಾಡಿದೆ. ಶಿಕ್ಷಣ, ಕೃಷಿ, ಉದ್ಯೋಗ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಅದು ಹೇಳಿದೆ. ಅಧಿಕಾರದ ಚುಕ್ಕಾಣಿ ಹಿಡಿದರೆ ಮಹಿಳೆಯರಿಗೆ ತಿಂಗಳಿಗೆ 800 ರೂಪಾಯಿ, 80 ವರ್ಷ ಮೇಲ್ಪಟ್ಟ ವೃದ್ಧರಿಗೆ 1,000 ರೂಪಾಯಿ ಪಿಂಚಣಿ ನೀಡುವುದಾಗಿ ಭರವಸೆ ಕೊಟ್ಟಿದೆ.
ಅಲ್ಲದೆ, ಬಿಹಾರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಪಕ್ಷ ಅಧಿಕಾರಕ್ಕೆ ಬಂದರೆ ಪಂಜಾಬ್ನಲ್ಲಿ ಮಾಡಿದಂತೆ ಪ್ರತ್ಯೇಕ ರಾಜ್ಯ ಕೃಷಿ ಮಸೂದೆಗಳನ್ನು ಜಾರಿಗೆ ತರುವುದಾಗಿಯೂ ಘೋಷಿಸಿದೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ರಂದೀಪ್ ಸುರ್ಜೇವಾಲಾ, ಶಕ್ತಿಸಿಂಗ್ ಗೋಹಿಲ್ ಸೇರಿ ಪಕ್ಷದ ಇತರೆ ನಾಯಕರು ಉಪಸ್ಥಿತರಿದ್ದರು.
ಅಕ್ಟೋಬರ್ 28 ರಿಂದ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆರ್ಜೆಡಿ, ಕಾಂಗ್ರೆಸ್, ಸಿಪಿಐ, ಸಿಪಿಐಎಂ ಮೈತ್ರಿಯಾಗಿ ಚುನಾವಣೆ ಎದುರಿಸಲಿವೆ. ಇತ್ತ ಬಿಜೆಪಿ, ಜೆಡಿಯು ಜಂಟಿಯಾಗಿ ಚುನಾವಣೆ ಎದುರಿಸುತ್ತಿದ್ದು, ಎಲ್ಜೆಪಿ ಬಿಜೆಪಿಯೊಂದಿಗೆ ಮಾತ್ರ ಮೈತ್ರಿ ಮಾಡಿಕೊಂಡಿದ್ದು, ಜೆಡಿಯು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.