ನವದೆಹಲಿ: ಕಳೆದ 40 ದಿನಗಳಿಂದ ಅಯೋಧ್ಯೆಯ ರಾಮಮಂದಿರ ಭೂವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯ ಸುಪ್ರೀಂಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದ ನಡೆದು ಇಂದು ಅಂತಿಮವಾಗಿ ವಕೀಲರು ತಮ್ಮ ವಾದ ಮಂಡನೆ ಮಾಡಿದರು. ಎಲ್ಲರ ವಾದಗಳನ್ನು ಆಲಿಸಿದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ನೇತೃತ್ವದ ಪಂಚ ಸದಸ್ಯ ಪೀಠ ವಿಚಾರಣೆ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದಾರೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ಸದಸ್ಯ ಪೀಠದ ಎದುರು ಈ ಪ್ರಕರಣದ ಅಂತಿಮ ವಿಚಾರಣೆ ನಡೆಯಿತು. ಈ ವೇಳೆ ರಾಮ್ ಲಲ್ಲಾ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ. ಪರಾಸರನ್ ಅಯೋಧ್ಯೆ ವಿಚಾರಣೆಯನ್ನು ಇನ್ನುಷ್ಟು ಕಾಲ ನಡೆಸಬೇಕು ಎಂದು ಮನವಿ ಮಾಡಿಕೊಂಡರು. ಆದರೆ ಈಗಾಗಲೇ ಪ್ರಕರಣದ ವಿಚಾರಣೆಗಾಗಿ ಬಹಳಷ್ಟು ಸಮಯವಕಾಶ ನೀಡಲಾಗಿದ್ದು, ಸಂಜೆ 5ಗಂಟೆಯೊಳಗೆ ಎಲ್ಲವನ್ನೂ ಮುಗಿಸುವಂತೆ ಮುಖ್ಯನ್ಯಾಯಮೂರ್ತಿ ಸೂಚನೆ ನೀಡಿದ್ದರು.
ವಿಚಾರಣೆ ಸಂದರ್ಭದಲ್ಲಿ ವಾದ ಮಂಡಿಸುವ ವೇಳೆ ಹಿಂದೂ ಮಹಾಸಭಾ ಪರ ವಕೀಲ ವರುಣ್ ಸಿನ್ಹಾ, ರಾಮಜನ್ಮ ಭೂಮಿ ಬಗೆಗಿನ ಪುಸ್ತಕ(ಅಯೋಧ್ಯ ರಿವಿಸಿಟೆಡ್) ಉಲ್ಲೇಖ ಮಾಡಿದ್ದಲ್ಲದೆ, ಸ್ಥಳದ ನಕ್ಷೆಯನ್ನು ಕೋರ್ಟ್ ಮುಂದಿಟ್ಟರು. ಈ ವೇಳೆ ಏಕಾಏಕಿ ಸುನ್ನಿ ವಕ್ಫ್ಬೋರ್ಡ್ ಪರ ವಕೀಲ ರಾಜೀವ್ ಧವನ್ ಮಧ್ಯಪ್ರವೇಶಿಸಿ ನಕ್ಷೆಯನ್ನು ಹರಿದು ಹಾಕಿದರು. ಈ ವೇಳೆ ಸುಪ್ರೀಂಕೋರ್ಟ್ನಲ್ಲಿ ಸ್ವಲ್ಪ ಸಮಯ ನಾಟಕೀಯ ಬೆಳವಣಿಗೆ ಉಂಟಾಯಿತು.
ಅಯೋಧ್ಯೆ ರಾಮಮಂದಿರ ಭೂವಿವಾದ ಪ್ರಕರಣದ ವಿಚಾರಣೆ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಅಕ್ಟೋಬರ್ 23ರೊಳಗೆ ತೀರ್ಪು ಹೊರಬೀಳುವ ಸಾಧ್ಯತೆ ದಟ್ಟವಾಗಿದ್ದು, ಮುಖ್ಯ ನ್ಯಾಯಮೂರ್ತಿ ಸುಪ್ರೀಂಕೋರ್ಟ್ನಿಂದ ನಿವೃತ್ತಿ ಆಗುವ ಹಿನ್ನೆಲೆಯಲ್ಲಿ ಅಷ್ಟರೊಳಗೆ (ಅಂದರೆ ನವೆಂಬರ್ 17ರೊಳಗೆ) ತೀರ್ಪು ನೀಡಬೇಕಾಗಿದೆ. ಸತತ 9 ವರ್ಷ ಪ್ರಕರಣದ ಕುರಿತು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ 134 ವರ್ಷಗಳ ಇತಿಹಾಸದ ಹಾಗೂ 70 ವರ್ಷದ ಈ ವ್ಯಾಜ್ಯಕ್ಕೆ ಕೊನೆಗೂ ತಾರ್ಕಿಕ ಅಂತ್ಯ ನೀಡಲು ಮುಂದಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹಿಂದೂ ಮಹಾಸಭಾ ಪರ ವಕೀಲ ವರುಣ್ ಸಿನ್ಹಾ, ಅಯೋಧ್ಯೆ ಪ್ರಕರಣದ ತೀರ್ಪು ಕಾಯ್ದಿರಿಸಲಾಗಿದ್ದು, ಮುಂದಿನ 23 ದಿನದೊಳಗೆ ತೀರ್ಪು ಹೊರಬೀಳಲಿದೆ ಎಂದಿದ್ದಾರೆ.