ಗುವಾಹತಿ(ಅಸ್ಸೋಂ): ತಮ್ಮ ಇಷ್ಟಾರ್ಥಗಳು ಸಿದ್ಧಸಲಿ ಎಂದು ಜನರು ಬ್ರಹ್ಮಪುತ್ರ ನದಿಗೆ ಹಣವನ್ನು ಎಸೆಯುತ್ತಾರೆ. ಆದರೆ ಇಲ್ಲಿನ ಕೆಲ ಮಕ್ಕಳು ತಮ್ಮ ಜೀವವನ್ನೂ ಲೆಕ್ಕಿಸದೆ, ಥರ್ಮಕೋಲ್ ಅನ್ನೇ ದೋಣಿಯಾಗಿ ಮಾಡಿಕೊಂಡು ನದಿಗಿಳಿದು, ಆ ಹಣವನ್ನು ಸಂಗ್ರಹಿಸಿ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದಾರೆ.
ಬ್ರಹ್ಮಪುತ್ರ ನದಿಯಲ್ಲಿ ಹಣ ಸಂಗ್ರಹಿಸುತ್ತಿರುವ ಮಕ್ಕಳು ಹೌದು, ಗುವಾಹತಿಯ ಸರೈಘಾಟ್ ಸೇತುವೆ ಈ ದೃಶ್ಯಗಳು ಕಂಡುಬರುತ್ತಿವೆ. ಜನರು ತಮ್ಮ ಆಸೆ, ಆಕಾಂಕ್ಷೆಗಳು ಈಡೇರಲು ಎಂದು ಬ್ರಹ್ಮಪುತ್ರ ನದಿಗೆ ಎಸೆಯುವ ಹಣವನ್ನೇ, ಈ ಮಕ್ಕಳು ನಿತ್ಯ ನದಿಗಿಳಿದು, ಆಯ್ದುಕೊಳ್ಳುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.
ನದಿ ಬಳಿಯೇ ಇರುವ ಅಮಿಂಗಾವ್ ಸ್ಲಂನ ಮಕ್ಕಳು ಪ್ರತಿನಿತ್ಯ ಕಾಯಿನ್ ಸಂಗ್ರಹಿಸಲು ನದಿಗಿಳಿಯುತ್ತಿದ್ದಾರೆ. ಇದಕ್ಕಾಗಿ ಥರ್ಮಕೋಲ್ ಅನ್ನೇ ದೋಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಮ್ಯಾಗ್ನೆಟ್ ಮೂಲಕ ಕಾಯಿನ್ಗಳನ್ನು ಸಂಗ್ರಹಿಸಿ, ದಿನದ ದುಡಿಮೆ ಪಡೆಯುತ್ತಿದ್ದಾರೆ ಎಂದು ಇಲ್ಲಿನ ಸ್ಥಳೀಯರು ತಿಳಿಸಿದ್ದಾರೆ.
ದಿನಕ್ಕೆ 200-300 ರೂಗಳನ್ನು ಮಕ್ಕಳು ಸಂಗ್ರಹಿಸುತ್ತಿದ್ದಾರೆ. ಆದರೆ ಅವರ ಜೀವಕ್ಕೆ ಇಲ್ಲಿ ಯಾವುದೇ ಗ್ಯಾರಂಟಿ ಇಲ್ಲ. ಅಷ್ಟು ದೊಡ್ಡ ನದಿಯಲ್ಲಿ, ಕೇವಲ ಥರ್ಮಕೋಲ್ನಲ್ಲಿ ಸಾಗಿ, ಇಂತಹ ಅಪಾಯಕಾರಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಮಾಡದಂತೆ ಸ್ಥಳೀಯರು, ಆಡಳಿತ ವರ್ಗದವರು ಮಕ್ಕಳಿಗೆ ಹೇಳಿದರೂ, ಜೀವನ ನಿರ್ವಹಣೆಗೆ ಮತ್ತೆ ಇದೇ ಕೆಲಸಕ್ಕಿಳಿದಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗ್ಗೆ ಕಾಯಿನ್ ಸಂಗ್ರಹಿಸಲು ನದಿಗಿಳಿಯುವ ಮಕ್ಕಳು, ಆನಂತರ ಶಾಲೆಯಿಂದ ಹಿಂದಿರುಗಿದ ನಂತರ ಮತ್ತೆ ನದಿಗೆ ಇಳಿಯುತ್ತಾರೆ. ಪ್ರಾಣಕ್ಕೇ ಕುತ್ತು ತರುವ ಕಾರ್ಯವನ್ನು ಪ್ರತಿನಿತ್ಯ ಮಾಡುತ್ತಿರುವ ಮಕ್ಕಳು ಹೀನಾಯ ಸ್ಥಿತಿ ಕಂಡು ಸ್ಥಳೀಯರು ಮರುಕ ವ್ಯಕ್ತಪಡಿಸುತ್ತಿದ್ದಾರೆ.