ಗುವಾಹಟಿ (ಅಸ್ಸೋಂ) :ಬಾರ್‌ಪೇಟಾ ಜಿಲ್ಲೆಯಲ್ಲಿ ಬುಧವಾರ ಒಬ್ಬ ವ್ಯಕ್ತಿ ಮೃತಪಡುವ ಮೂಲಕ ಅಸ್ಸೋಂನಲ್ಲಿ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 40 ಕ್ಕೇರಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ)ದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹಕ್ಕೆ ಅಸ್ಸೋಂ ತತ್ತರ: 40 ಮಂದಿ ಸಾವು, ಸಂಕಷ್ಟಕ್ಕೆ ಸಿಲುಕಿದ 2 ಲಕ್ಷ ಜನ..! - ಅಸ್ಸೋಂನಲ್ಲಿ ಭಾರೀ ಮಳೆ
ಭಾರೀ ಮಳೆಯಿಂದ ಅಸ್ಸೋಂ ನಲುಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯಿಂದ ಸುಮಾರು ಎರಡು ಲಕ್ಷ ಜನ ಸಂಕಷ್ಟಕ್ಕೆ ಸಿಲುಕಿದ್ದು, ಇದುವರೆಗೆ 40 ಮಂದಿ ಮೃತಪಟ್ಟಿದ್ದಾರೆ.
ಪ್ರವಾಹ ಪೀಡಿತ ರಾಜ್ಯದ 11 ಜಿಲ್ಲೆಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ. ಒಟ್ಟು 33 ಜಿಲ್ಲೆಗಳ ಪೈಕಿ 12 ಜಿಲ್ಲೆಗಳ ಸುಮಾರು 2 ಲಕ್ಷ ಜನರ ಮೇಲೆ ಪ್ರವಾಹ ಪರಿಣಾಮ ಬೀರಿದೆ. ಕಳೆದ ಮೂರು ವಾರಗಳಿಂದ ತಲೆದೋರಿರುವ ಪ್ರವಾಹ ಪರಿಸ್ಥಿತಿಯಿಂದ ಮೊರಿಗಾಂವ್, ಟಿನ್ಸುಕಿಯಾ, ಧುಬ್ರಿ, ನಾಗಾನ್, ನಲ್ಬಾರಿ, ಬಾರ್‌ಪೆಟಾ, ಧೆಮಾಜಿ, ಉದಲ್‌ಗುರಿ, ಗೋಲ್‌ಪಾರಾ ಮತ್ತು ದಿಬ್ರುಗರ್ ಜಿಲ್ಲೆಗಳಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ. ಮೇ 22 ರಿಂದ ಪ್ರತ್ಯೇಕ ಭೂ ಕುಸಿತ ಘಟನೆಗಳಲ್ಲಿ ಸುಮಾರು 24 ಜನ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿಗೀಡದವರ ಸಂಖ್ಯೆ 40 ಕ್ಕೆ ಏರಿಕೆಯಾಗಿದೆ ಎಂದು ಎಎಸ್‌ಡಿಎಂಎ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ 348 ಹಳ್ಳಿಗಳ ಸುಮಾರು 2 ಲಕ್ಷ ಜನರು ಪ್ರವಾಹದ ಹೊಡೆತಕ್ಕೆ ಸಿಲುಕಿದ್ದಾರೆ. ಇದುವರೆಗೆ 26,910 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಮಹಿಳೆಯರು ಮಕ್ಕಳು ಸೇರಿದಂತೆ 1,095 ಮಂದಿ 35 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸುಮಾರು 1.27 ಲಕ್ಷ ಕೋಳಿಗಳು ಮತ್ತು 1.21 ಲಕ್ಷ ಇತರ ಸಾಕು ಪ್ರಾಣಿಗಳು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿವೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್), ಅಸ್ಸೋಂ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಎಸ್ಡಿಆರ್ಎಫ್) ಹಾಗೂ ಸ್ಥಳೀಯ ಸಂಸ್ಥೆಗಳು ಜಂಟಿಯಾಗಿ ಪರಿಹಾರದ ಕಾರ್ಯದಲ್ಲಿ ತೊಡಗಿವೆ. ಸಂಕಷ್ಟದಲ್ಲಿರುವ ಜನರಿಗೆ ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.