ನವದೆಹಲಿ: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಿರುವುದಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
"3 ದಿನಗಳ ಹಿಂದಷ್ಟೇ ನಾನು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತಗೊಳಿಸುವ ಮೂಲಕ ಜಾಗತಿಕ ತೈಲ ಬೆಲೆ ಕುಸಿತದ ಲಾಭವನ್ನು ಭಾರತೀಯ ಗ್ರಾಹಕರಿಗೆ ತಲುಪಿಸುವಂತೆ ಪ್ರಧಾನಿ ಕಚೇರಿಗೆ ಮನವಿ ಮಾಡಿದ್ದೆ. ಆದರೆ ಈ ಸಲಹೆಯನ್ನು ಗಮನಿಸುವ ಬದಲು, ಇಂಧನದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದಾರೆ" ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರು ಕಚ್ಚಾ ತೈಲ ಬೆಲೆಗಳು ಗಣನೀಯವಾಗಿ ಕಡಿಮೆಯಾಗಿವೆ, ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ಗ್ರಾಹಕರಿಗೆ ಇದರ ಲಾಭವನ್ನು ತಲುಪಿಸುವುದನ್ನು ನಾವು ನಿರೀಕ್ಷಿಸಬಹುದೇ? ಎಂದು ಸೀತಾರಾಮನ್ಗೆ ಕೇಳುತ್ತಾರೆ. ಆದರೆ ಇದಕ್ಕೆ ಉತ್ತರಿಸದ ಸಚಿವೆ, ಪ್ರಶ್ನೆಗಳಿಗೆ ಧನ್ಯವಾದಗಳು ಎಂದು ಹೇಳಿ ಹೊರಡುತ್ತಾರೆ.
ಕೇಂದ್ರ ಸರ್ಕಾರ ಶನಿವಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ಕಡಿಮೆಯಾಗಿರುವಾಗಲೂ ಕೂಡ ದೇಶದ ಗ್ರಾಹಕರ ಮೇಲೆ ಹೊಡೆತ ಬಿದ್ದಿರುವುದಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಹಾಗೂ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.