ನವದೆಹಲಿ:ಕೊರೊನಾ ವೈರಸ್ ಹಿನ್ನೆಲೆ ಇರಾನ್‌ನಲ್ಲಿರುವ ಭಾರತೀಯರನ್ನು ತವರಿಗೆ ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ಇನ್ನು ಎಂಇಎ ವಕ್ತಾರ ರವೀಶ್ ಕುಮಾರ್, ಇರಾನ್‌ನಲ್ಲಿರುವ ಭಾರತೀಯರು ಯಾರೂ ಈ ಸೋಂಕಿಗೆ ಒಳಗಾಗಿಲ್ಲ. ವೈರಸ್ ಬಗ್ಗೆ ಮುನ್ನೆಚ್ಚರಿಕೆ ವಹಿಸಿದ್ದು, ವಿಶ್ವದಾದ್ಯಂತ ಭಾರತೀಯ ರಾಯಭಾರ ಕಚೇರಿಗಳು ಕಾರ್ಯಪ್ರವೃತ್ತವಾಗಿವೆ. ಇರಾನ್‌ನ ಭಾರತೀಯ ರಾಯಭಾರ ಕಚೇರಿಯು ಮೀನುಗಾರರು ಹಾಗೂ ಭಾರತೀಯರ ಜೊತೆ ನಿಕಟ ಸಂಪರ್ಕದಲ್ಲಿದೆ. ವೈರಸ್ ಬಗ್ಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀಡಲಾಗುತ್ತಿದೆ ಎಂದಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮಾತನಾಡಿದ್ದು, ಇರಾನ್ನಲ್ಲಿ ಭಾರತೀಯರಿಗಾಗಿ ಕ್ಲಿನಿಕ್ ಸ್ಥಾಪಿಸಲು ವೈದ್ಯಕೀಯ ತಂಡ ಇಂದು ಸಂಜೆ ಇರಾನ್ ತಲುಪಲಿದೆ ಎಂದಿದ್ದಾರೆ.
ಭಾರತದಲ್ಲಿರುವ ಇರಾನಿಯನ್ ಪ್ರವಾಸಿಗರ ಬಗ್ಗೆ ಮಾತನಾಡಿದ ರವೀಶ್ ಕುಮಾರ್, ಕೊರೊನಾ ವೈರಸ್ ಹರಡುವ ಮೊದಲೇ ಇಲ್ಲಿಗೆ ಅವರು ಬಂದಿದ್ದಾರೆ. ಉಭಯ ದೇಶಗಳ ನಡುವೆ ವಿಮಾನಯಾನ ಸಂಪರ್ಕ ಕಡಿತವಾದ್ದರಿಂದ ಅವರು ಹಿಂದುರುಗಲು ಸಾಧ್ಯವಾಗಿಲ್ಲ. ವಿಮಾನಯಾನ ಪುನರಾರಂಭವಾದ ನಂತರ ಅವರು ಮರಳಲಿದ್ದಾರೆ ಎಂದರು.
ಇರಾನ್ನಲ್ಲಿ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಭಾರತೀಯರನ್ನು ನಾಗರಿಕ ವಿಮಾನಯಾನ ಮಾರ್ಗಗಳ ಮೂಲಕ ಹಿಂದಿರುಗಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ನಮಗೆ ಇರಾನಿನ ಅಧಿಕಾರಿಗಳಿಂದ ಉತ್ತಮ ಸಹಕಾರ ಬೇಕು. ಭಾರತೀಯ ಪ್ರಜೆಗಳು ಹಿಂತಿರುಗುವ ಮೊದಲು ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.