ಜಮ್ಮು & ಕಾಶ್ಮೀರ: ಭಾರತ ಮತ್ತು ಪಾಕಿಸ್ತಾನದ ಗಡಿಯುದ್ದಕ್ಕೂ ಕನಿಷ್ಠ 250 ರಿಂದ 300 ಭಯೋತ್ಪಾದಕರು ವಾಸಿಸುತ್ತಿದ್ದಾರೆ ಎಂದು ಕಾಶ್ಮೀರದ ಇನ್ಸ್‌ಪೆಕ್ಟರ್ ಜನರಲ್ (ಐಜಿ) ರಾಜೇಶ್ ಮಿಶ್ರಾ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಬಳಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಲು ಈ ಭಯೋತ್ಪಾದಕರ ಕುಮ್ಮಕ್ಕು ಇದೆ. ಉಭಯ ದೇಶದ ಗಡಿ ಭಾಗದಲ್ಲಿ ಪ್ರತಿ ಲಾಂಚಿಂಗ್ ಪ್ಯಾಡ್‌ನಲ್ಲಿ 250 ರಿಂದ 300ಕ್ಕೂ ಹೆಚ್ಚು ಭಯೋತ್ಪಾದಕರು ವಾಸಿಸುತ್ತಿದ್ದಾರೆ ಎಂದು ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಯೋತ್ಪಾದಕರು ದೇಶದ ಒಳಭಾಗಕ್ಕೆ ನುಸುಳಲು ಪ್ರಯತ್ನಿಸಿದ್ದಾರೆ. ಆದರೆ, ನಮ್ಮ ಭದ್ರತಾ ಪಡೆಗಳು ಈ ಪ್ರಯತ್ನಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕಿಸ್ತಾನ ಇತ್ತೀಚೆಗೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಮುಯ್ಯಿಗೆ ಮುಯ್ಯಿ ಎಂಬಂತೆ ನಾವೂ ಸಹ ಪಾಕಿಸ್ತಾನದ 11 ಮಂದಿ ಸೈನಿಕರನ್ನು ಹೊಡೆದುರುಳಿಸಿದ್ದೇವೆ ಹಾಗೂ ಆಸ್ತಿ - ಪಾಸ್ತಿಗೆ ಸಾಕಷ್ಟು ಹಾನಿ ಉಂಟು ಮಾಡಿದ್ದೇವೆ ಎಂದು ಮಿಶ್ರಾ ಹೇಳಿದ್ದಾರೆ.
ಇದಕ್ಕೂ ಮುನ್ನ ನವೆಂಬರ್ 13 ರಂದು ಜಮ್ಮು ಮತ್ತು ಕಾಶ್ಮೀರದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಮೂವರು ಭಾರತೀಯ ಸೈನಿಕರು ಸಾವನ್ನಪ್ಪಿದ್ದರು, ಬೆಂಬಲಿತ ಭಯೋತ್ಪಾದಕರಿಂದ ಪಾಕಿಸ್ತಾನ ಸೇನೆ ಒಳನುಸುಳುವಿಕೆಗೆ ಯತ್ನಿಸಿದ್ದು, ಪ್ರಯತ್ನ ವಿಫಲವಾದಾಗ ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ.
ಈ ಕದನ ವಿರಾಮ ಉಲ್ಲಂಘನೆಯಿಂದಾಗಿ ಉರಿ ವಲಯದಲ್ಲಿ ಇಬ್ಬರು ಸೈನಿಕರು ಹಾಗೂ ಗುರೆಜ್ ವಲಯದಲ್ಲಿ ಓರ್ವ ಸೈನಿಕ ಸಾವನ್ನಪ್ಪಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.