ಲಖನೌ( ಉತ್ತರಪ್ರದೇಶ): ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ಅಪೊಲೋ ಆಸ್ಪತ್ರೆಯಲ್ಲಿ ರೋಗಿ ಮತ್ತು ಮಗುವನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.
ಲಕ್ನೋದ ಅಪೊಲೋ ಆಸ್ಪತ್ರೆ ವಿರುದ್ಧ ಆರೋಪ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರ ಬಿಲ್ ಮೊದಲು 75 ಸಾವಿರ ಎಂದು ಹೇಳಲಾಗಿತ್ತು. ನಂತರ 2 ಲಕ್ಷದ 70 ಸಾವಿರ ಎಂದು ಬಿಲ್ ನೀಡಲಾಗಿತ್ತು. ಬಿಲ್ ನೀಡದ ಕಾರಣ ರೋಗಿ ಹಾಗೂ ಆಕೆಯ ಮಗುವನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ ಎಂದು ರೋಗಿಯ ಪತಿ ಆರೋಪಿಸಿದ್ದಾರೆ.
ಲಖನೌ ನಿವಾಸಿ ಸಂದೀಪ್ ಪತ್ನಿಗೆ ಅಪಘಾತವಾಗಿತ್ತು, ಅವರನ್ನು ಶನಿವಾರ ಕೃಷ್ಣಾ ನಗರದ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಾಸ್ಮೆಟಿಕ್ ಸರ್ಜರಿಗಾಗಿ 75 ಸಾವಿರ ಖರ್ಚಾಗಲಿದೆ ಎಂದು ಹೇಳಿದ್ದರು. ಆದರೆ ಸರ್ಜರಿ ನಂತರ 2 ಲಕ್ಷದ 70 ಸಾವಿರ ಎಂದು ಬಿಲ್ ಮಾಡಿದ್ದು, ಹಣ ಕಟ್ಟಲು ಸಾಧ್ಯವಿಲ್ಲ ಎಂದ ಕಾರಣಕ್ಕೆ ರೋಗಿ ಹಾಗೂ ಆಕೆಯ ಚಿಕ್ಕ ಮಗುವನ್ನು ಆಸ್ಪತ್ರೆ ಸಿಬ್ಬಂದಿ 24 ಗಂಟೆಗಳ ಕಾಲ ಒತ್ತೆಯಾಳಾಗಿರಿಸಿಕೊಂಡಿದ್ದಾರೆ ಎಂದು ಸಂದೀಪ್ ಆರೋಪಿಸಿದ್ದಾರೆ.
ನನಗೆ ಸ್ಟಾರ್ ಹೆಲ್ತ್ ವಿಮೆಯಿಂದ ಚಿಕಿತ್ಸೆಗಾಗಿ 1 ಲಕ್ಷ 63 ಸಾವಿರ ದೊರೆಯಲಿದೆ ಎಂದು ಕಂಪನಿ ತಿಳಿಸಿದೆ. ಆದರೆ ಆಸ್ಪತ್ರೆಯಲ್ಲಿ ಇಷ್ಟೊಂದು ಹಣ ಬಿಲ್ ಮಾಡಿದ್ದಾರೆ. ನನಗೆ ಹೆಚ್ಚಿನ ಹಣ ಕಟ್ಟಲು ಸಾಧ್ಯವಿಲ್ಲ ಎಂದು ಸಂದೀಪ್ ಅಳಲು ತೋಡಿಕೊಂಡಿದ್ದಾರೆ. ಇನ್ನು ಇದೇ ವೇಳೆ ಸುದ್ದಿ ಮಾಡಲು ಮುಂದಾದ ಮಾಧ್ಯಮದವರ ವಿರುದ್ಧ ಆಸ್ಪತ್ರೆ ಸಿಬ್ಬಂದಿ ಹರಿಹಾಯ್ದ ಘಟನೆ ಕೂಡ ನಡೆದಿದೆ.