ವಿಜಯವಾಡ (ಆಂಧ್ರಪ್ರದೇಶ):ಬ್ರಿಟನ್ನಿಂದ ದೆಹಲಿಗೆ ಬಂದಿದ್ದ ಆಂಗ್ಲೋ-ಇಂಡಿಯನ್ ಮಹಿಳೆ, ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡು ವಿಶೇಷ ರೈಲಿನಲ್ಲಿ ಆಂಧ್ರಕ್ಕೆ ಆಗಮಿಸಿದ್ದು, ಆ ಮಹಿಳೆಯಲ್ಲಿ ಬ್ರಿಟನ್ನಲ್ಲಿ ಕಾಣಿಸಿರುವ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ಆಂಧ್ರಪ್ರದೇಶದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಕಾಟಮ್ನೇನಿ ಭಾಸ್ಕರ್ ಹೇಳಿದ್ದಾರೆ.
ದೆಹಲಿಯಿಂದ ರಾಜ್ಯಕ್ಕೆ ಆಗಮಿಸಿದ ಮಹಿಳೆಯಿಂದ ಯಾರಿಗೂ ಕೂಡ ಸೋಂಕು ಹರಡಿಲ್ಲ ಎಂದು ಭಾಸ್ಕರ್ ಮಾಹಿತಿ ನೀಡಿದ್ದಾರೆ. "ಆಕೆಯ ಜೊತೆ ಪ್ರಯಾಣಿಸಿದ್ದ ಅವರ ಮಗನಲ್ಲೂ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ. ಸರ್ಕಾರವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿರುವುದರಿಂದ ವದಂತಿಗಳನ್ನು ನಂಬುಬೇಡಿ"ಎಂದು ಮನವಿ ಮಾಡಿದ್ದಾರೆ.
ಅಧಿಕೃತ ಮಾಹಿತಿಯ ಪ್ರಕಾರ, ಬ್ರಿಟನ್ನಿಂದ ರಾಜ್ಯಕ್ಕೆ ಬಂದ 1,423 ಜನರಲ್ಲಿ 1,406 ಜನರನ್ನು ಆಂಧ್ರಪ್ರದೇಶ ಆಡಳಿತ ಪತ್ತೆ ಮಾಡಿದೆ. "ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾದ ಈ 1,406 ಜನರಲ್ಲಿ ಒಟ್ಟು 12 ಜನರಲ್ಲಿ ಸೋಂಕು ಪತ್ತೆಯಾಗಿದೆ.
1,406 ಜನರ 6,364 ಪ್ರಾಥಮಿಕ ಸಂಪರ್ಕಗಳನ್ನು ಪರೀಕ್ಷಿಸಲಾಯಿತು. ಆ ಪೈಕಿ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಸಕಾರಾತ್ಮಕ ರೋಗಿಗಳ ಒಟ್ಟು 24 ಮಾದರಿಗಳನ್ನು ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮೊಲಿಕ್ಯುಲರ್ ಬಯಾಲಜಿಗೆ(ಸಿಸಿಎಂಬಿ) ಕಳುಹಿಸಲಾಗಿದೆ.
ಸಿಸಿಎಂಬಿ, ರಾಜಮಂಡ್ರಿಗೆ ಸೇರಿದ ಮಹಿಳೆಯ ಮಾದರಿಯಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ಹೇಳಿದೆ. ಉಳಿದ 23 ಮಾದರಿಯ ವರದಿಗಳನ್ನು ಸಿಸಿಎಂಬಿಯಿಂದ ಇನ್ನೂ ಸ್ವೀಕರಿಸಲಾಗಿಲ್ಲ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.