ಯುವ ಪ್ರತಿಭಾವಂತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ಸಾವಿನ ನಂತರ ಮಾನಸಿಕ ಖಿನ್ನತೆ ಹಾಗೂ ಮಾನಸಿಕ ಕಾಯಿಲೆಯ ವಿಷಯದ ಚರ್ಚೆ ದೇಶದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹೊರಗಿನ ಜಗತ್ತಿಗೆ ಗೊತ್ತಾಗದೇ ವ್ಯಕ್ತಿಯನ್ನು ಮೌನವಾಗಿ ಒಳಗಿಂದೊಳಗೇ ಕೊಲ್ಲುವ ಈ ಸಮಸ್ಯೆಯನ್ನು ಪರಿಹರಿಸುವ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮಾನಸಿಕ ಖಿನ್ನತೆಯನ್ನು ಹೋಗಲಾಡಿಸಲು ಸೂಕ್ತ ಚಿಕಿತ್ಸಾ ಪದ್ಧತಿ, ಆರೋಗ್ಯಕರ ಜೀವನ ಶೈಲಿಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ.
ಮಾನಸಿಕ ಆರೋಗ್ಯ - ಭಾರತದ ಅಂಕಿ ಸಂಖ್ಯೆಗಳು ಏನು ಹೇಳುತ್ತವೆ?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 90 ಮಿಲಿಯನ್ ಅಂದರೆ ಶೇ 7.5 ರಷ್ಟು ಭಾರತೀಯರು ಒಂದಿಲ್ಲೊಂದು ರೀತಿಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಾರಣಾಂತಿಕ ಕಾಯಿಲೆಗಳನ್ನು ಹೊರತುಪಡಿಸಿದರೆ ಮಾನಸಿಕ ಕಾಯಿಲೆಗಳ ಅಪಾಯವೇ ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. 2017 ರಲ್ಲಿದ್ದಂತೆ ಪ್ರತಿ 7 ಭಾರತೀಯರಲ್ಲಿ ಓರ್ವ ವ್ಯಕ್ತಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. 1990 ರಿಂದೀಚಿಗೆ ಮಾನಸಿಕ ಕಾಯಿಲೆಯ ಪ್ರಮಾಣ ಬಹುತೇಕ ದುಪ್ಪಟ್ಟಾಗಿದೆ. 2016 ರ ಅಂಕಿ ಅಂಶಗಳ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡ 15 ರಿಂದ 39 ವಯೋಮಾನದ ವ್ಯಕ್ತಿಗಳ ಸಾವಿಗೆ ಮಾನಸಿಕ ಕಾಯಿಲೆಯೇ ಪ್ರಮುಖ ಕಾರಣವಾಗಿತ್ತು.
1990 ರಿಂದ 2017 ರ ಅವಧಿಯಲ್ಲಿ ಪ್ರತಿ 7 ರಲ್ಲಿ ಓರ್ವ ಭಾರತೀಯ ಖಿನ್ನತೆ, ಉದ್ವೇಗ, ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು ಎಂದು ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ. ಮಾನಸಿಕ ಅನಾರೋಗ್ಯದ ಸಾಂಕ್ರಾಮಿಕತೆಯಿಂದ ಭಾರತ ಬಳಲುತ್ತಿದೆ ಎಂಬುದು ಇದರಿಂದ ಸಾಬೀತಾಗಿದೆ.