ಮಹಾರಾಷ್ಟ್ರ: ಒಂದು ತಿಂಗಳಿಂದ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ನಡೆದ ನಾಟಕೀಯ ಬೆಳವಣಿಗೆಗಳು ಇಂದು ಸುಖಾಂತ್ಯ ಕಂಡಿವೆ.
ರಾತ್ರೋರಾತ್ರಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಮಹಾರಾಷ್ಟ್ರದಲ್ಲಿ ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಮತ್ತೆ ಅಧಿಕಾರಕ್ಕೇರಿದೆ. ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿಯ ಅಜಿತ್ ಪವಾರ್ ಬೆಳ್ಳಂಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇಡೀ ದೇಶದ ಜನರಲ್ಲಿ ಅಚ್ಚರಿ ಮೂಡಿಸಿದ್ರೆ, ಶಿವಸೇನೆ ಹಾಗೂ ಕಾಂಗ್ರೆಸ್ಗೆ ಆಘಾತವಾಗಿದೆ.
ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ 'ಮಹಾರಾಷ್ಟ್ರದ' ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಎನ್ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್ ನಡೆಸಿದ ಸಭೆಯಲ್ಲಿ ಬಹುತೇಕ ನಿರ್ಧಾರ ಕೈಗೊಳ್ಳಲಾಗಿತ್ತು. 30 ವರ್ಷಗಳಿಂದ ಬಿಜೆಪಿಯೊಂದಿಗೆ ಸಖ್ಯ ಬೆಳೆಸಿದ್ದ ಶಿವಸೇನೆ, ಚುನಾವಣಾ ಫಲಿತಾಂಶದ ನಂತರ 50:50 ಅನುಪಾತದ ಆಧಾರದಲ್ಲಿ ಅಧಿಕಾರ ಹಂಚಿಕೆ ಮಾಡುವಂತೆ ಬೇಡಿಕೆ ಇಟ್ಟಿತ್ತು.
ಶಿವಸೇನೆಯ ಈ ನಿರ್ಧಾರವನ್ನು ಖಡಾಖಂಡಿತವಾಗಿ ನಿರಾಕರಿಸಿದ ಬಿಜೆಪಿ ನಾವೇ ಐದು ವರ್ಷಗಳ ಕಾಲ ಅಧಿಕಾರದಲ್ಲಿರುತ್ತೇವೆ ಎಂದು ಸೂಚಿಸಿತ್ತು. ಒಪ್ಪದ ಶಿವಸೇನೆ ಬಿಜೆಪಿಯೊಂದಿಗಿನ ಮೈತ್ರಿ ಅಂತ್ಯಗೊಳಿಸಿ ಕಾಂಗ್ರೆಸ್ ಹಾಗೂ ಎನ್ಸಿಪಿ ಬಾಗಿಲು ತಟ್ಟಿತ್ತು. ಇನ್ನೇನು ಉದ್ದವ್ ಠಾಕ್ರೆ ಅವರು ಸಿಎಂ ಆಗಲಿದ್ದಾರೆ ಎಂದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಎನ್ಸಿಪಿ ಜೊತೆ ಸೇರಿ ಬಿಜೆಪಿ ಸರ್ಕಾರ ರಚಿಸಿ ಅಚ್ಚರಿ ಮೂಡಿಸಿದೆ.
ಪಕ್ಷಗಳ ಬಲಾಬಲ:
ಮಹಾರಾಷ್ಟ್ರದಲ್ಲಿ ಅಕ್ಟೋಬರ್ 24ರಂದು ಪ್ರಕಟಗೊಂಡ ಫಲಿತಾಂಶದಲ್ಲಿ ಬಿಜೆಪಿ 105, ಶಿವಸೇನೆ, 56, ಎನ್ಸಿಪಿ 55, ಕಾಂಗ್ರೆಸ್ 44 ಹಾಗೂ ಇತರೆ 32 ಸ್ಥಾನಗಳು ಪಡೆದುಕೊಂಡಿದ್ದವು. ಮೂರು ದಶಕದಿಂದ ಶಿವಸೇನೆಯನ್ನೇ ನೆಚ್ಚಿಕೊಂಡು ಬಿಜೆಪಿ ಚುನಾವಣೆ ಎದುರಿಸುತ್ತಿತ್ತು. ಈ ಬಾರಿ ಅಧಿಕಾರದ ಲಾಲಸೆಗೆ ಬಿದ್ದು ಬಿಜೆಪಿಯಿಂದ ದೂರ ಹೋಗಿ ಸರ್ಕಾರ ರಚಿಸಲು ಭಾರೀ ಪ್ರಮಾಣದಲ್ಲಿ ಕಸರತ್ತು ನಡೆಸಿತು. ಆದರೆ, ಅದೆಲ್ಲವೂ ವಿಫಲವಾಯಿತು. ಸರ್ಕಾರ ರಚಿಸಲು ಬೇಕಾದ ಸ್ಥಾನಗಳು 145. ಸರ್ಕಾರ ರಚಿಸಿರುವ ಬಿಜೆಪಿ (105) ಹಾಗೂ ಎನ್ಸಿಪಿ (55) ಸೇರಿದರೆ 160 ಸ್ಥಾನಗಳಾಗುತ್ತವೆ. ಈ ಮೂಲಕ ಸಿಎಂ ಆಗುವ ಕನಸು ಕಂಡಿದ್ದ ಶಿವಸೇನೆ ನಾಯಕ ಉದ್ದವ್ ಠಾಕ್ರೆ ಮೇಲೆ ಬಂಡೆ ಬಿದ್ದಂತಾಗಿದೆ.
ನವೆಂಬರ್ 30ರಂದು ಬಿಜೆಪಿ-ಎನ್ಸಿಪಿ ಬಹುಮತ ಸಾಬೀತುಪಡಿಸುತ್ತವೆ. ಬಳಿಕ ಸಚಿವ ಸಂಪುಟ ರಚಿಸುವುದಾಗಿ ಬಿಜೆಪಿ ಹೇಳಿದೆ. ಆದರೆ, ಎನ್‌ಸಿಪಿಯ ಮೂವತ್ತು ಶಾಸಕರು ಮಾತ್ರ ಬಿಜೆಪಿ ಬೆಂಬಲ ನೀಡುತ್ತಿರುವುದಾಗಿ ತಿಳಿದು ಬಂದಿದೆ. ಹೀಗಾದರೆ ಬಿಜೆಪಿ 105, ಎನ್ಸಿಪಿ 30 ಸೇರಿದರೆ 135 ಮಾತ್ರ ಆಗುತ್ತದೆ. ಹೀಗಾಗಿ ಪಕ್ಷೇತರರರನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಇತ್ತ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಿತ್ ಪವಾರ್ ಸರ್ಕಾರ ರಚಿಸಲು ಬೆಂಬಲ ನೀಡಿರುವುದು ನನ್ನ ವೈಯಕ್ತಿಕ ನಿರ್ಧಾರ ಎಂದಿದ್ದಾರೆ. ಇದು ನೋಡಿದರೆ, ಸರ್ಕಾರ ರಚನೆಯಲ್ಲಿ ಇನ್ನೂ ಗೊಂದಲಗಳು ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಷ್ಟ್ರಪತಿ ಆಡಳಿತ ವಾಪಸ್
ಚುನಾವಣಾ ಫಲಿತಾಂಶದ ನಂತರ ಮಹಾರಾಷ್ಟ್ರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಸರ್ಕಾರ ರಚಿಸಲು ಆಹ್ವಾನ ನೀಡಿದ್ದರು. ಆದರೆ, ಶಿವಸೇನೆ ಕಮಲದ ಜತೆ ಮೈತ್ರಿ ಮುರಿದುಕೊಂಡ ಪರಿಣಾಮ ಬಿಜೆಪಿ ಸರ್ಕಾರ ರಚಿಸಲು ಮುಂದಾಗಲಿಲ್ಲ. ಬಳಿಕ ಎರಡನೇ ದೊಡ್ಡ ಪಕ್ಷ ಶಿವಸೇನೆ ಅವಕಾಶ ನೀಡಿದರು. ಅವರಿಂದಲೂ ಸಾಧ್ಯವಾಗದ ಕಾರಣ ಮೂರನೇ ದೊಡ್ಡ ಪಕ್ಷ ಎನ್ಸಿಪಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡಿದರು. ಆದರೆ, ಯಾರಿಂದರೂ ಸರ್ಕಾರ ರಚನೆಯಾಗದ ಕಾರಣ ನವೆಂಬರ್ 12ರಂದು ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲರು ಶಿಫಾರಸು ಮಾಡಿದರು.
ರಾಷ್ಟ್ರಪತಿ ಆಡಳಿತ ಬಂದ ನಂತರ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ಸಿಪಿ ಸಭೆಗಳ ಮೇಲೆ ನಡೆಸಿ ಸರ್ಕಾರ ರಚಿಸುವ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದಿದ್ದರು. ಇಂದು ಹೈಕಮಾಂಡ್ ಜೊತೆ ಅಂತಿಮವಾದ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸುವುದಾಗಿ ಕಾಂಗ್ರೆಸ್ ತಿಳಿಸಿತ್ತು. ಈಗ ಸರ್ಕಾರ ರಚನೆಯಾಗಿದ್ದು ಮಹಾರಾಷ್ಟ್ರದಲ್ಲಿ ತಂದಿದ್ದ ರಾಷ್ಟ್ರಪತಿ ಆಡಳಿತ ವಾಪಸ್ ಪಡೆಯಲಾಗಿದೆ. ಇನ್ನೊಂದು ವಿಶೇಷ ಏನೆಂದರೆ ಕೇವಲ 11ದಿನದಲ್ಲೇ ರಾಷ್ಟ್ರಪತಿ ಆಡಳಿತ ವಾಪಸ್ ಪಡೆದಿರುವುದು.