ನವದೆಹಲಿ:ಕೊರೊನಾದಿಂದಾಗಿ ದಿನದಿಂದ ದಿನಕ್ಕೆ ಹಾನಿ ಹೆಚ್ಚುತ್ತಿದೆ. ಇದರೊಂದಿಗೆ, ಹೆಚ್ಚಿನ ಸಂಖ್ಯೆಯ ಆರೋಗ್ಯ ಕಾರ್ಯಕರ್ತರನ್ನೂ ಸೋಂಕು ಬಾಧಿಸುತ್ತಿದೆ. ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಆರೋಗ್ಯ ಕಾರ್ಯಕರ್ತರ ಕೊರತೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದೆಹಲಿಯ ಪ್ರತಿಷ್ಟಿತ ಏಮ್ಸ್ ಆಸ್ಪತ್ರೆ ಜಾಗೃತಿ ವಿಡಿಯೋ ಬಿಡುಗಡೆ ಮಾಡಿದೆ.
ಲಕ್ಷಣರಹಿತ ಅಥವಾ ಕಡಿಮೆ ಸೋಂಕಿನ ಲಕ್ಷಣವಿರುವ ಕೋವಿಡ್ ರೋಗಿಗಳು ಮನೆಯಲ್ಲೇ ಪ್ರತ್ಯೇಕವಾಗಿರುವುದು ಅತ್ಯುತ್ತಮ ವಿಧಾನವಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಕೊರೊನಾ ವೈರಸ್ನ ಯಾವುದೇ ಲಕ್ಷಣವಿಲ್ಲದ ಕೋವಿಡ್ ರೋಗಿಗಳು ಮನೆಯಲ್ಲೇ ಕ್ವಾರಂಟೈನ್ನಲ್ಲಿದ್ದು ಚಿಕಿತ್ಸೆ ಪಡೆಯುವುದು ಉತ್ತಮ ಎಂದು ದೆಹಲಿಯ ಏಮ್ಸ್ ಆಸ್ಪತ್ರೆ ಕೂಡಾ ಹೇಳಿದೆ.
ಈ ಬಗ್ಗೆ ಜಾಗೃತಿ ಮೂಡಿಸಲು ಏಮ್ಸ್, ವಿಡಿಯೋವೊಂದನ್ನು ಮಾಡಿದ್ದು, ಶೀಘ್ರದಲ್ಲೇ ಇದನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಕೊರೊನಾ ರೋಗಿಗಳು ಮತ್ತೊಬ್ಬರ ಸಂಪರ್ಕ ಬರದಂತೆ ಕ್ವಾರಂಟೈನ್ ಆಗುವುದು ಮುಖ್ಯ. ಕಡಿಮೆ ರೋಗಲಕ್ಷಣ ಅಥವಾ ಯಾವುದೇ ರೋಗಲಕ್ಷಣಗಳಿಲ್ಲದ ಜನರು ಮನೆಯಲ್ಲೇ ಪ್ರತ್ಯೇಕವಾಗಿರುವುದು ಉತ್ತಮ ಆಯ್ಕೆ ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.
ಮನೆಯಲ್ಲೇ ಕ್ವಾರಂಟೈನ್ನಲ್ಲಿದ್ದು ಹೇಗೆ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು? ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು? ಕೋವಿಡ್ ಸಂಬಂಧ ಯಾವೆಲ್ಲಾ ನಿಯಮಗಳನ್ನು ಮನೆಗಳಲ್ಲಿದ್ದು ಪಾಲಿಸಬೇಕು? ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಎಷ್ಟು ಎಚ್ಚರಿಕೆಯಿಂದ ಇರಬೇಕು? ಏನಾದರೂ ಗೊಂದಲಗಳಿದ್ದರೆ ಯಾರನ್ನು ಸಂಪರ್ಕಿಸಬೇಕು? ಈ ಎಲ್ಲಾ ಕುರಿತಾದ ಮಾಹಿತಿಯನ್ನು ಏಮ್ಸ್ ಆಸ್ಪತ್ರೆ ತನ್ನ ಜಾಗೃತಿ ವಿಡಿಯೋದಲ್ಲಿ ತಿಳಿಸಿದೆ. ಈ ವಿಡಿಯೋ ಇಲ್ಲಿದೆ ನೋಡಿ.