ಟೋಂಕ್ (ರಾಜಸ್ಥಾನ):ಶಂಖ ಊದಿ, ಮಣ್ಣಿನಲ್ಲಿ ಕುಳಿತುಕೊಳ್ಳಿ, ಹಣ್ಣಿನ ಎಲೆಗಳ ರಸವನ್ನು ಕುಡಿಯಿರಿ, ಔಷಧಗಳ ಸೇವನೆಗೆ ನಿಯಂತ್ರಣ ಹೇರಿ... ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ರಾಜಸ್ಥಾನದ ಬಿಜೆಪಿ ಸಂಸದ ಸುಖ್ಬೀರ್ ಸಿಂಗ್ ಜೌನಾಪುರಿಯಾ ಅವರು ನೀಡಿದ ಸಲಹೆಗಳಿವು.
ಟೋಂಕ್-ಸವಾಯಿ ಮಾಧೋಪುರ್ ಕ್ಷೇತ್ರದ ಸಂಸದ ತಮ್ಮ ಫೇಸ್‌ಬುಕ್ ಖಾತೆಯಲ್ಲಿ 2.31 ನಿಮಿಷಗಳ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಗದ್ದೆಯ ಮಣ್ಣಿನಲ್ಲಿ (ಕೆಸರಿನಲ್ಲಿ) ಕುಳಿತು ಶಂಖ ಊದುತ್ತಿರುವ ದೃಶ್ಯಗಳನ್ನು ಈ ವಿಡಿಯೋದಲ್ಲಿ ಕಾಣಬಹುದು.
ಈ ಮೊದಲು ಅವರು ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21ರಂದು ಬೆಂಕಿಯ ವೃತ್ತದ ಮಧ್ಯೆ ಕುಳಿತಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ಅದನ್ನು ಅಗ್ನಿ ಸಾಧನ. ಯೋಗದ ಒಂದು ರೂಪ ಎಂದಿದ್ದರು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸದೃಢವಾಗಿರಲು ನೈಸರ್ಗಿಕ ಉತ್ಪನ್ನಗಳನ್ನೇ ಬಳಸಬೇಕು ಎಂದು ಅಂದು ತಿಳಿಸಿದ್ದರು.
ಈಗ ಗದ್ದೆಯ ಮಣ್ಣಿನಲ್ಲಿ ಕೂತು ಶಂಖ ಊದುತ್ತಿರುವ ವಿಡಿಯೋ ಹಂಚಿಕೊಂಡಿರುವ ಅವರು, ಕೆಸರಿನಲ್ಲಿ ಕುಳಿತುಕೊಂಡರೆ ರೋಗ ನಿರೋಧಕ ಶಕ್ತಿ ನಮ್ಮ ದೇಹದಲ್ಲಿ ವೃದ್ಧಿಸುತ್ತದೆ ಎಂದು ಹೇಳಿದರು. ಹಾಗೆಯೇ ಶಂಖ ಊದುವುದರಿಂದ ಶ್ವಾಸಕೋಶ ಮತ್ತು ಮೂತ್ರಪಿಂಡ ಯಾವುದೇ ತೊಂದರೆ ಇಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಕಾರಣ ನೀಡಿದರು.
ಬಿಜೆಪಿ ಸಂಸದ ಸುಖ್ಬೀರ್ ಸಿಂಗ್ ಜೌನಾಪುರಿಯಾ ಮೊದಲು ನಾನು 10-20 ಸೆಕೆಂಡ್ಗಿಂತ ಹೆಚ್ಚು ಸಮಯ ಊದಲು ಸಾಧ್ಯವಾಗುತ್ತಿರಲಿಲ್ಲ. ಈಗ ಸುಮಾರು 2 ನಿಮಿಷಗಳ ಕಾಲ ನಿಲ್ಲಿಸದೆ ಶಂಖ ಊದುತ್ತೇನೆ. ಇದರಿಂದಾಗಿ ಉಸಿರಾಟದ ತೊಂದರೆ ಮಾಯವಾಗುತ್ತದೆ ಎಂದರು.
ಔಷಧಿಗಳನ್ನು ಸೇವಿಸುವುದರ ಮೂಲಕ ನಿಮಗೆ ರೋಗ ನಿರೋಧಕ ಶಕ್ತಿ ದೊರೆಯುವುದಿಲ್ಲ. ನೈಸರ್ಗಿಕವಾಗಿ ಮಾತ್ರ ಅದನ್ನು ಪಡೆಯಲು ಸಾಧ್ಯ. ನೀವು ಹೊರಗೆ ಹೋಗಬೇಕು. ಮಳೆಯಲ್ಲಿ ನೆನೆಯಬೇಕು, ಮಣ್ಣಿನಲ್ಲಿ ಕುಳಿತುಕೊಳ್ಳಿ, ಸೈಕ್ಲಿಂಗ್‌ಗೆ ಹೋಗಬೇಕು, ಶಂಖವನ್ನು ಊದಿ, ದೇಸಿ ಆಹಾರವನ್ನು ಸೇವಿಸಿ. ಇಷ್ಟೆಲ್ಲಾ ಮಾಡಿದರೆ ಔಷಧಿಗಳನ್ನು ಸೇವಿಸುವ ಅಗತ್ಯವೇ ಇಲ್ಲ ಎಂದು ಹೇಳಿದರು.
ಹೆಚ್ಚಾಗಿ ಹಣ್ಣುಗಳು ಮತ್ತು ತರಕಾರಿ ಖರೀದಿಸುತ್ತೇನೆ. ಬೆಂಡೆಕಾಯಿ, ಮೆಣಸಿನಕಾಯಿ ಗಿಡದ ಎಲೆ ಮತ್ತು ವಿವಿಧ ಹಣ್ಣಿನ ಮರಗಳ ಎಲೆಗಳ ರಸ ಕುಡಿಯುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತೇನೆ ಎಂದು ಅವರು ವಿವರಿಸಿದರು.
ನೀವು ಔಷಧಿ ಸೇವಿಸುದನ್ನು ನಾನು ತಡೆಯಲು ಸಾಧ್ಯವಿಲ್ಲ ಆದರೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅದು ಯಾವುದೇ ರೀತಿ ಸಹಾಯ ಮಾಡುವುದಿಲ್ಲ ಎಂದು ವಿಡಿಯೋದ ಕೊನೆಯಲ್ಲಿ ಹೇಳಿದರು.
ಕೋವಿಡ್-19 ವಿರುದ್ಧ ಹೋರಾಡಲು ಪ್ರಮುಖ ರಾಜಕೀಯ ನಾಯಕರು ನೀಡಿದ ಸಲಹೆಗಳನ್ನು ಅನುಕರಣೆ ಮಾಡಿದ್ದರು. ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ನೀಡಿದ್ದ ಸಲಹೆಯಂತೆ ಹಪ್ಪಳಗಳನ್ನು (ಪಾಪಾಡ್) ತಿಂದಿದ್ದರು. ಹಾಗೆಯೇ ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥರ ದಿಲೀಪ್ ಘೋಷ್ ಸೂಚಿಸಿದಂತೆ ಗೋ ಮೂತ್ರ ಸೇವಿಸಿದ್ದರು.