ನವದೆಹಲಿ:ಕಾಶ್ಮೀರದಲ್ಲಿ ಮತ್ತೊಂದು ಭಯೋತ್ಪಾದಕ ಕೃತ್ಯ ನಡೆಸಲು ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಕಣಿವೆ ನಗರದ ಭದ್ರತೆ ಹೆಚ್ಚಿಸಲಾಗಿದೆ.
ಉಗ್ರರ ಕೃತ್ಯದ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಸಭೆ ನಡೆಸಿದ್ದಾರೆ. ಭದ್ರತೆ ಕುರಿತು ಮಾಹಿತಿ ಪಡೆದುಕೊಂಡು, ಪ್ರತಿ ದಾಳಿ ನಡೆಸಲು ಹೆಚ್ಚಿನ ಸೇನೆಯನ್ನು ಕಳುಹಿಸಿ ಕೊಡುವಂತೆ ಸಲಹೆ ನೀಡಿದ್ದಾರೆ. ಅದರಂತೆ ಕೇಂದ್ರ ಸರ್ಕಾರ ಕಣಿವೆ ನಗರಕ್ಕೆ ಹೆಚ್ಚಿನ ಸೈನಿಕರನ್ನು ಕಳುಹಿಸಿ ಕೊಟ್ಟಿದೆ.
ಭಾರತೀಯ ನೆಲದಲ್ಲಿ ವಿಧ್ವಂಸಕ ಕುಕೃತ್ಯ ನಡೆಸಲು ಸಂಚು ರೂಪಿಸಿರುವ ಉಗ್ರರ ಬೆನ್ನಿಗೆ ಪಾಕ್ ಸೇನೆ ಬೆಂಬಲ ನೀಡುತ್ತಿದೆ ಎಂಬ ಮಾಹಿತಿ ದೊರಕಿದೆ. ಹೀಗಾಗಿ ಹೆಚ್ಚುವರಿ 100 ಅರೆ ಸೇನಾ ತುಕಡಿಗಳನ್ನು ಕಾಶ್ಮೀರದಲ್ಲಿ ನಿಯೋಜಿಸಲಾಗಿದೆ.
ಕಾಶ್ಮೀರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಅಲ್ಲದೆ ದಾಖಲೆ ಸಂಖ್ಯೆಯಲ್ಲಿ ಅಮರನಾಥ ಯಾತ್ರಿಕರು ಸುಸೂತ್ರವಾಗಿ ತಮ್ಮ ಯಾತ್ರೆ ಪೂರೈಸುತ್ತಿರುವುದು ಉಗ್ರರ ಕಣ್ಣು ಕೆಂಪಾಗಿಸಿದೆ. ಹೀಗಾಗಿ ಶಾಂತಿ ಕದಡುವ ಉದ್ದೇಶದಿಂದ ಉಗ್ರರು ಕಾಶ್ಮೀರಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಕಾಶ್ಮೀರದ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿರುವ ಅಜಿತ್ ಧೋವಲ್ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರತಿಯೊಂದು ಚಟುವಟಿಕೆಯ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ.