ಕೋಲ್ಕತ್ತಾ:ಶಿಕ್ಷಣ ಸಂಸ್ಥೆಗಳಲ್ಲಿ ಹಿಂಸಾಚಾರ ಮತ್ತು ಅರಾಜಕತೆಯಂತಹ ಕೃತ್ಯಗಳು ನಡೆಯೋದು ಆತಂಕಕಾರಿ ಬೆಳವಣಿಗೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಮಂಗಳವಾರ ಕಳವಳ ವ್ಯಕ್ತಪಡಿಸಿದ್ದಾರೆ.ಜಾಧವ್‌ಪುರ ವಿಶ್ವವಿದ್ಯಾಲಯ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ(ಜೆಎನ್‌ಯು) ನಡೆದ ಹಿಂಸಾಚಾರ ಖಂಡಿಸಿ ಗವರ್ನರ್ ಟ್ವೀಟ್ ಮಾಡಿದ್ದಾರೆ.
'ರಾಜ್ಯ ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳ ಲೋಪ ಮತ್ತು ನಿಷ್ಕ್ರಿಯತೆಯಿಂದ ಕುಲಪತಿಯ ಸ್ಥಾನಕ್ಕೆ ಧಕ್ಕೆಯುಂಟಾಯಿತು. ಜೆಎನ್‌ಯು ಕ್ಯಾಂಪಸ್‌ನಲ್ಲಿ ಹಿಂಸೆ ಮತ್ತು ಹಲ್ಲೆ ಮಾಡುವ ಮೊದಲು ಯೋಚಿಸಬೇಕಿತ್ತು' ಎಂದಿದ್ದಾರೆ. ಈ ಸಂಬಂಧ ಹಿಂಸಾಚಾರದ ವಿರುದ್ಧ ಪ್ರತಿಭಟನೆ ವೇಳೆ ಕೋಲ್ಕತ್ತಾದ ಸುಲೇಖಾ ಮೊರ್ ಬಳಿ ಜಾಧವಪುರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆ ಸಂಭವಿಸಿದೆ.
ಪ್ರತಿಭಟನೆಯ ವಿಡಿಯೋವೊಂದರಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಯಿಂದ ಹೊಡೆದಿದ್ದಾರೆ. ಆದರೆ, ಜಾಧವ್‌ಪುರ ವಿವಿ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಸಿಬ್ಬಂದಿ ಲಾಠಿ ಚಾರ್ಜ್ ಮಾಡಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸುದೀಪ್ ಸರ್ಕಾರ್ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೋಮವಾರ ಜೆಎನ್‌ಯು ಹಿಂಸಾಚಾರ ಖಂಡಿಸಿದ್ದರು ಮತ್ತು ಇದನ್ನು 'ವಿದ್ಯಾರ್ಥಿ ಸಮುದಾಯದ ಮೇಲೆ ಫ್ಯಾಸಿಸ್ಟ್‌ಗಳ ಸರ್ಜಿಕಲ್ ಸ್ಟ್ರೈಕ್ ಎಂದು ಕಿಡಿ ಕಾರಿದ್ದರು. ಇದು ಪ್ರಜಾಪ್ರಭುತ್ವದ ಮೇಲಿನ ಅಪಾಯಕಾರಿ ದಾಳಿ. ಸರ್ಕಾರದ ವಿರುದ್ಧ ಮಾತನಾಡುವವರನ್ನು ಪಾಕ್ ಮತ್ತು ದೇಶದ ಶತ್ರು ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. ದೇಶದಲ್ಲಿ ಇಂತಹ ಪರಿಸ್ಥಿತಿಯನ್ನ ನಾವು ಈ ಹಿಂದೆ ನೋಡಿಲ್ಲ' ಎಂದು ಬ್ಯಾನರ್ಜಿ ಆಕ್ರೋಶ ಹೊರ ಹಾಕಿದ್ದಾರೆ.
'ನಾನು ವಿದ್ಯಾರ್ಥಿ ನಾಯಕನಾಗಿದ್ದರಿಂದ ನನಗೆ ವಿದ್ಯಾರ್ಥಿ ರಾಜಕೀಯ ಚೆನ್ನಾಗಿ ತಿಳಿದಿದೆ. ಭಾರತವು ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ದೇಶ. ಇದು ನಮ್ಮನ್ನು ಮೂಲಭೂತವಾದಿ ಪಾಕ್‌ದಿಂದ ಪ್ರತ್ಯೇಕಿಸುತ್ತದೆ. ನಿನ್ನೆ ಒಂದು ಕಡೆ ಗೂಂಡಾಗಳನ್ನು ಕಳುಹಿಸಿ ಹಲ್ಲೆ ಮಾಡಿಸಿದ್ದಾರೆ. ಇದು ವಿದ್ಯಾರ್ಥಿ ಸಮುದಾಯದ ಮೇಲೆ ಫ್ಯಾಸಿಸ್ಟ್‌ಗಳ ದಾಳಿ. ನಾನು ವಿದ್ಯಾರ್ಥಿ ಸಮುದಾಯದ ಪರ ನಿಲ್ಲುತ್ತೇನೆ'ಎಂದು ಅವರು ಹೇಳಿದ್ದಾರೆ.
ಭಾನುವಾರ ಸಂಜೆ ಜೆಎನ್‌ಯುಎಸ್‌ಯು ಅಧ್ಯಕ್ಷ ಆಯಿಷೆ ಘೋಷ್ ಸೇರಿ ವಿಶ್ವವಿದ್ಯಾಲಯದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಮುಖಕ್ಕೆ ಬಟ್ಟೆ ಧರಿಸಿದ ಗುಂಪು ಜೆಎನ್‌ಯುಗೆ ಪ್ರವೇಶಿಸಿ ದಾಳಿ ಮಾಡಿತ್ತು.