ತಿರುಪತಿ(ಆಂಧ್ರಪ್ರದೇಶ):ಆಹಾರವೆಂದು ಕಚ್ಚಾಬಾಂಬ್ ತಿನ್ನುತ್ತಿರುವಾಗ ಅದು ಸ್ಫೋಟಗೊಂಡು ಹಸುವೊಂದು ಸಾವನ್ನಪ್ಪಿರುವ ಘಟನೆ ತಾಲೂಕಿನ ಚಂದಮಾಮಪಲ್ಲೆ ಗ್ರಾಮದಲ್ಲಿ ನಡೆದಿದೆ.
ಆಹಾರವೆಂದು ತಿನ್ನಲು ಹೋದಾಗ ಕಚ್ಚಾಬಾಂಬ್ ಸ್ಫೋಟ: ಗೋಮಾತೆ ಸಾವು! - ತಿರುಪತಿ ಕಚ್ಚಾಬಾಂಬ್ ಸ್ಫೋಟ ಸುದ್ದಿ
ಕಾಡುಹಂದಿ ಬೇಟೆಗೆ ಇಟ್ಟಿದ್ದ ಕಚ್ಚಾಬಾಂಬ್ ತಿನ್ನಲು ಹೋದಾಗ ಅದು ಸ್ಫೋಟಗೊಂಡ ಪರಿಣಾಮ ಹಸುವೊಂದು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಸಂಭವಿಸಿದೆ.
ಕಾಡುಹಂದಿ ಬೇಟೆಗಾಗಿ ಕೆಲ ದುಷ್ಕರ್ಮಿಗಳು ಕಚ್ಚಾಬಾಂಬ್ ಇಟ್ಟಿದ್ದರು. ರೈತ ರಾಂಬಾಬು ತನ್ನ ಹಸುವನ್ನು ಮೇಯಿಸಲು ಹತ್ತಿರದ ಕಾಡಿಗೆ ಹೋಗಿದ್ದರು. ಮೇಯಿಸಲು ಹೋದ ವೇಳೆ ಹಸು ಆಹಾರವೆಂದು ಕಚ್ಚಿದಾಗ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಹಸುವಿನ ಬಾಯಿ ಛಿದ್ರಗೊಂಡು ಗಂಭೀರವಾಗಿ ಗಾಯಗೊಂಡಿತು. ಈ ವಿಷಯ ತಿಳಿದ ಸ್ಥಳೀಯರು ಕೂಡಲೇ ಪಶು ವೈದ್ಯರಿಗೆ ಮಾಹಿತಿ ನೀಡಿದರು. ವೈದ್ಯರು ಸಮಯಕ್ಕೆ ಸರಿಯಾಗಿ ಬಂದು ಹಸುವಿಗೆ ಸೂಕ್ತ ಚಿಕಿತ್ಸೆ ನೀಡಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಗೋಮಾತೆ ಸಾವನ್ನಪ್ಪಿದೆ.
ಈ ಹಿಂದೆ ಜಿಲ್ಲೆಯ ವೇದುರುಕುಪ್ಪಂ, ಪೆದ್ದಪಂಜಾಣಿ ಮತ್ತು ಶಾಂತಿಪುರಂ ತಾಲೂಕುಗಳ ಹಲವಾರು ಹಳ್ಳಿಗಳಲ್ಲಿ ಇದೇ ರೀತಿಯ ಘಟನೆಗಳು ನಡೆದು ಹಸುಗಳು ಸಾವನ್ನಪ್ಪಿವೆ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.