ತಿರುವನಂತಪುರಂ: ಇಲ್ಲಿ ನಡೆದಿದ್ದ ಸಿಪಿಐಎಂ ಕಾರ್ಯಕರ್ತರಿಬ್ಬರ ಕೊಲೆ ಪ್ರಕರಣ ಸಂಬಂಧ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಮಧ್ಯರಾತ್ರಿಯಂದು ಸಿಪಿಐಎಂ ಯುವ ಘಟಕದ ಹಕ್ ಮೊಹಮ್ಮದ್ (24) ಹಾಗೂ ಮಿಥಿಲಾಜ್ (32) ಎಂಬುವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೈಗೈಯಲಾಗಿತ್ತು.
ಕತ್ತಿ, ಚಾಕು ಹಿಡಿದು ಬೈಕ್ನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಇಬ್ಬರನ್ನೂ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಘಟನೆ ಸಂಬಂಧ ಸೇಜಿತ್, ಅಜಿತ್, ನಜೀಬ್, ಸಾಥಿ ಎಂಬುವರನ್ನು ಬಂಧಿಸಲಾಗಿದೆ. ಇವರಲ್ಲದೆ ಸಂಜೀವ್ ಹಾಗೂ ಸನಲ್ಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದಲ್ಲದೆ ಪೊಲೀಸ್ ಎಫ್ಐಆರ್ನಲ್ಲಿ ಇದೊಂದು ರಾಜಕೀಯ ಪ್ರೇರಿತ ಕೊಲೆ ಎಂದು ನಮೂದಿಸಿಲ್ಲವಾದರೂ, ಇದಕ್ಕೂ ಮೊದಲೇ ಈ ಗುಂಪುಗಳ ನಡುವೆ ಗಲಾಟೆ ನಡೆದಿತ್ತು. 2019ರ ಲೋಕಸಭಾ ಚುನಾವಣೆಯ ವೇಳೆ ಗಲಾಟೆಗಳಾಗಿದ್ದು, ಬಳಿಕ ಪರಿಸ್ಥಿತಿ ತಣ್ಣಗಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.