ನವದೆಹಲಿ:ಕೆನಡಾ ಪೊಲೀಸ್ ಅಧಿಕಾರಿಗಳೆಂದು ಹೇಳಿ ವಿದೇಶಿಗರನ್ನು ವಂಚಿಸಿದ ಆಪಾದನೆಯಡಿ 32 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ದೆಹಲಿಯ ಮೋತಿ ನಗರದಲ್ಲಿ ನಕಲಿ ಕಾಲ್ ಸೆಂಟರ್ ನಡೆಸುತ್ತಿದ್ದ 32 ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಬಂಧಿತರಿಂದ 55 ಕಂಪ್ಯೂಟರ್, 35 ಮೊಬೈಲ್ ಫೋನ್ ಮತ್ತು ಅಕ್ರಮ ಸಾಫ್ಟ್‌ವೇರ್ ಪ್ರೋಗ್ರಾಂಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 15ರಂದು ಈ ತಂಡ ಕೆನಡಾದ ಪೊಲೀಸ್ ಅಧಿಕಾರಿಗಳೆಂದು ಸಾಮಾಜಿಕ ವಿಮೆ ಸಂಖ್ಯೆ (ಸಿನ್) ಉಲ್ಲಂಘಿಸಿ ದೂರವಾಣಿಯಲ್ಲಿ ಮಾತನಾಡಿ ವಿದೇಶ ಪ್ರಜೆಗಳನ್ನು ವಂಚಿಸಿದ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಸಿನ್ ಎನ್ನುವುದು ಒಂಬತ್ತು ಅಂಕಿಯ ಸಂಖ್ಯೆಯಾಗಿದ್ದು, ಇದು ಕೆನಡಾದಲ್ಲಿ ಕೆಲಸ ಮಾಡಲು ಅಥವಾ ಸರ್ಕಾರಿ ಕಾರ್ಯಕ್ರಮಗಳಿಗೆ ನೀಡಲಾಗುತ್ತದೆ. ಸಿನ್ ಹಗರಣ ಎಸಗಿ ಕೆನಡಾ ಪ್ರಜೆ ಎಲ್ವಿಸ್ ಹೆನ್ರಿ ಎಂಬಾತನಿಗೆ 13,500 ಡಾಲರ್ ವಂಚಿಸಿದ್ದರು. ಈ ಬಗ್ಗೆ ಹೆನ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕಣವನ್ನು ಕೈಗೆತ್ತಿಕೊಂಡ ಮೋತಿ ನಗರದ ಪೊಲೀಸರು 32 ಜನ ಆರೋಪಿಗಳನ್ನು ಬಂಧಿಸಿದ್ದಾರೆ.