ಹೈದರಾಬಾದ್:ಕುಡಿದ ಮತ್ತಿನಲ್ಲಿ 16 ವರ್ಷದ ಬಾಲಕನೊಬ್ಬ ತಾನು ಚಲಾಯಿಸುತ್ತಿದ್ದ ಕಾರನ್ನು ಆಟೋ ರಿಕ್ಷಾ ಮೇಲೆ ಹತ್ತಿಸಿರುವ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ.
ಎಣ್ಣೆ ಏಟಲ್ಲಿ ಅಪ್ರಾಪ್ತನಿಂದ ಯದ್ವಾತದ್ವಾ ಕಾರು ಡ್ರೈವ್... ಆಟೋ ಮೇಲೆ ಹತ್ತಿಸಿ ಇಬ್ಬರ ಪ್ರಾಣ ತೆಗೆದ!
ಕುಡಿದ ಮತ್ತಿನಲ್ಲಿ ತಂದೆಯ ಕಾರು ಡ್ರೈವ್ ಮಾಡಿರುವ 16 ವರ್ಷದ ಅಪ್ರಾಪ್ತನೋರ್ವ ಅದನ್ನ ಆಟೋರಿಕ್ಷಾ ಮೇಲೆ ಹತ್ತಿಸಿ, ಇಬ್ಬರ ಸಾವಿಗೆ ಕಾರಣವಾಗಿರುವ ಘಟನೆ ಹೈದರಾಬಾದ್ನ ಕುಕಟಪಲ್ಲಿಯಲ್ಲಿ ನಡೆದಿದೆ.
ಘಟನೆಯಲ್ಲಿ 14 ತಿಂಗಳ ಶಿಶು ಹಾಗೂ ಆತನ ಅಜ್ಜಿ ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, 14 ತಿಂಗಳ ಬಾಲಕ, ಇಬ್ಬರು ಸಹೋದರರು, ತಾಯಿ ಸಂಧ್ಯಾಕಿರಣ ಹಾಗೂ ಅಜ್ಜಿ ನಾಗಮಣಿ ಆಟೋದಲ್ಲಿ ಕುಕುಟಪಲ್ಲಿಯಿಂದ ಯಾಪ್ರಾಲ್ಗೆ ತೆರಳುತ್ತಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಕಾರು ಸವಾರ ಅದಕ್ಕೆ ಬಂದು ಗುದ್ದಿದ್ದಾನೆ. ಜತೆಗೆ ಬೈಕ್ ಮೇಲೂ ಈತನ ಕಾರು ಹರಿದಿದೆ.
ಘಟನೆಯಿಂದ ಸ್ಥಳದಲ್ಲೇ ಮಗು, ಅಜ್ಜಿ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಇನ್ನು ತಂದೆ ಬಳಿ ಕಾರು ತೆಗೆದುಕೊಂಡು ಬಂದಿದ್ದ ಈ ಯುವಕ ಕಂಠಪೂರ್ತಿ ಮದ್ಯ ಸೇವಿಸಿ ಡ್ರೈವ್ ಮಾಡುತ್ತಿದ್ದನೆಂದು ತಿಳಿದು ಬಂದಿದೆ.