ಶಿಮ್ಲಾ (ಹಿಮಾಚಲ ಪ್ರದೇಶ):ಲಾಕ್‌ಡೌನ್ ಅವಧಿಯ ಕೇವಲ ಎರಡೇ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ದಾಖಲಾದ ಆತ್ಮಹತ್ಯೆಯ ಪ್ರಕರಣಗಳ ಅಂಕಿ-ಅಂಶಗಳು ಆಘಾತ ಉಂಟು ಮಾಡುತ್ತಿವೆ. ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಲ್ಲೇ ರಾಜ್ಯಾದ್ಯಂತ ಒಟ್ಟು 121 ಜನ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ವರದಿಯಾಗಿದೆ.
ಭಾನುವಾರವಷ್ಟೇ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ 6 ತಿಂಗಳಿನಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಇದೇ ಸಮಯದಲ್ಲಿ ಹಿಮಾಚಲ ಪ್ರದೇಶದಲ್ಲಿ ಕಳೆದ ಎರಡು ತಿಂಗಳಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ದಾಖಲೆಯ ಹೆಚ್ಚಳ ಕಂಡುಬಂದಿದೆ. ಇದಕ್ಕೆ ಮಾನಸಿಕ ಖಿನ್ನತೆಯೇ ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ.
ಏಪ್ರಿಲ್ ಮತ್ತು ಮೇ ತಿಂಗಳ ಲಾಕ್‌ಡೌನ್ ಸಮಯದಲ್ಲಿ 121 ಜನರು ತಮ್ಮ ಜೀವನವನ್ನು ತಾವೇ ಅಂತ್ಯ ಕಾಣಿಸಿದ್ದಾರೆ. 2019ರಲ್ಲಿ ರಾಜ್ಯದಲ್ಲಿ ಸುಮಾರು 563 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020 ರಲ್ಲಿ ಈವರೆಗೆ 237 ಆತ್ಮಹತ್ಯೆ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಇದರಲ್ಲಿ ಕೇವಲ ಏಪ್ರಿಲ್ ಮತ್ತು ಮೇ ತಿಂಗಳೊಂದರಲ್ಲೇ ಅತಿ ಹೆಚ್ಚು ಅಂದರೆ, 121 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಈವರೆಗೆ ಕಾಂಗ್ರಾ ಜಿಲ್ಲೆಯಲ್ಲಿ 140 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇನ್ನೊಂದೆಡೆ ಮಂಡಿಯಲ್ಲಿ 82 ಹಾಗೂ ಸೋಲನ್ ಜಿಲ್ಲೆಯಲ್ಲಿ 67 ಪ್ರಕರಣಗಳು ದಾಖಲಾಗಿವೆ.