ನವದೆಹಲಿ:ಪೌರತ್ವ ಕಾಯ್ದೆ ಸಂಬಂಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಪ್ರತಿಭಟನೆಯ ವೇಳೆ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇದರಲ್ಲಿ ಪತ್ರಕರ್ತರೂ ಸೇರಿದ್ದಾರೆ.
ಗಲಭೆಕೋರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇನ್ನು ಹಿಂಸಾಚಾರ ಸಂಬಂಧ ಈವರೆಗೂ 18 ಎಫ್ಐಆರ್ ದಾಖಲಾಗಿದ್ದು, 106 ಜನರನ್ನು ಬಂಧಿಸಿರುವ ಮಾಹಿತಿ ಲಭ್ಯವಾಗಿದೆ.
ವಿಶೇಷ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಬುಧವಾರ ತಡರಾತ್ರಿ ಹಿಂಸಾಚಾರ ಪೀಡಿತ ಈಶಾನ್ಯ ದೆಹಲಿಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಗಲಭೆ ಪೀಡಿತ ಪ್ರದೇಶಗಳಲ್ಲಿ ಜಾಫ್ರಾಬಾದ್, ಮೌಜ್ಪುರ್-ಬಾಬರ್ಪುರ್, ಗೋಕುಲ್ಪುರಿ, ಜೊಹ್ರಿ ಎನ್ಕ್ಲೇವ್ ಮತ್ತು ಶಿವ ವಿಹಾರ್ ಸೇರಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಅಲ್ಲದೆ ಬುಧವಾರ ತಡರಾತ್ರಿ ಭದ್ರತಾ ಪಡೆಗಳು ಈಶಾನ್ಯ ದೆಹಲಿಯ ವಿವಿಧ ಭಾಗಗಳಲ್ಲಿ ಧ್ವಜ ಮೆರವಣಿಗೆ ನಡೆಸಿವೆ.