ಹೈದರಾಬಾದ್(ತೆಲಂಗಾಣ):ಇತ್ತೀಚೆಗಷ್ಟೇ ಮಲೇರಿಯಾ ರೋಗ ನಿರ್ಮೂಲನೆಗೆ ಬಳಸುವ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಒಪ್ಪಿಗೆ ನೀಡಿತ್ತು. ಈ ಲಸಿಕೆಯನ್ನು ಹೈದರಾಬಾದ್ನಲ್ಲಿರುವ ಭಾರತ್ ಬಯೋಟೆಕ್ ಕಂಪನಿ ಉತ್ಪಾದನೆ ಮಾಡಲಿದೆ ಎಂದು ಕಂಪನಿಯ ಅಂತಾರಾಷ್ಟ್ರೀಯ ವ್ಯವಹಾರ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ.ರೇಚಸ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂಗ್ಲೆಂಡಿನ ಗ್ಲಾಕ್ಸೋಸ್ಮಿತ್ಕ್ಲೈನ್ (GSK) ಕಂಪನಿಯ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಮಲೇರಿಯಾ ಲಸಿಕೆ ಉತ್ಪಾದನೆ ಮಾಡಲಿದೆ ಎಂದು ತಿಳಿಸಿದ್ದಾರೆ.
ಗ್ಲಾಕ್ಸೋಸ್ಮಿತ್ಕ್ಲೈನ್ 'ಆರ್ಟಿಎಸ್ಎಸ್' ಎಂಬ ಮಲೇರಿಯಾ ಲಸಿಕೆ ಕಂಡುಹಿಡಿದಿದ್ದು, ಕೆಲವು ದಿನಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮತಿ ಪಡೆದಿದೆ. ಈ ವ್ಯಾಕ್ಸಿನ್ ಅನ್ನು ಆಫ್ರಿಕಾದಲ್ಲಿ ಅದರಲ್ಲೂ ಮಲೇರಿಯಾದಿಂದ ತೀವ್ರವಾಗಿ ಬಾಧಿಸಲ್ಪಟ್ಟ ರಾಷ್ಟ್ರಗಳಿಗೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಗೆ ಸೂಚಿಸಿದೆ.
2028ರವರೆಗೆ ವರ್ಷಕ್ಕೆ ಒಂದು ಕೋಟಿ ಮಲೇರಿಯಾ ಲಸಿಕೆ ಡೋಸ್ ಅಗತ್ಯವಿದ್ದು ಜಿಎಸ್ಕೆ ಕಂಪನಿಯು ಭಾರತ್ ಬಯೋಟೆಕ್ನೊಂದಿಗೆ ಲಸಿಕೆ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದೆ. ಲಸಿಕೆ ಸಂಶೋಧನೆಯ ವೇಳೆ ಸುಮಾರು 8 ಲಕ್ಷ ಮಕ್ಕಳಿಗೆ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ನೀಡಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಲೇರಿಯಾ ವ್ಯಾಕ್ಸಿನ್ಗೆ ಅನುಮತಿ ನೀಡಿದೆ.
ಇದನ್ನೂ ಓದಿ:ಜಗತ್ತಿನ ಮೊಟ್ಟ ಮೊದಲ ಮಲೇರಿಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ